ಗುಜರಾತ್‌ನ ಸೂರತ್‌ನಲ್ಲಿ ಚಿಕ್ಕ ಹುಡುಗಿಯೊಬ್ಬಳು ಸ್ವತಃ ಗರ್ಭಪಾತ ಮಾಡಿಕೊಂಡು ಭ್ರೂಣವನ್ನು ಒಂದು ಚರಂಡಿ ಬಳಿ ಎಸೆದ ಘಟನೆ ಬೆಳಕಿಗೆ ಬಂದಿದೆ.
ಜನವರಿ 9 ರಂದು ಸೂರತ್‌ನ ಅಪೇಕ್ಷನಗರದಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಕ್ಕಳು ಚರಂಡಿಯ ಬಳಿ ಸಿಗರೇಟ್ ಪ್ಯಾಕೆಟ್ ಮತ್ತು ಗುಳ್ಳೆಗಳ ನಡುವೆ ಭ್ರೂಣವನ್ನು ಕಂಡು ಹೆದರಿಕೆಯಿಂದ ಕೂಗಿದ್ದಾರೆ. ಬಳಿಕ ಹಿರಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾದ ಭ್ರೂಣವು ಹೆಣ್ಣು ಮಗುವಿನದ್ದಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪೊಲೀಸರ ತನಿಖೆಯಿಂದ ಈ ಘಟನೆಯಲ್ಲಿ 16 ವರ್ಷದ ಬಾಲಕಿಯ ಪಾತ್ರ ಬಹಿರಂಗವಾಗಿದೆ.
“ಆರಂಭದಲ್ಲಿ, ಆಕೆಯ ತಾಯಿ ಮತ್ತು ಭ್ರೂಣವನ್ನು ಗರ್ಭಪಾತ ಮಾಡಿಸಿದ ವ್ಯಕ್ತಿ ಈ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಪೊಲೀಸರು ನಿರಂತರವಾಗಿ ತನಿಖೆ ನಡೆಸಿದಾಗ, 16 ವರ್ಷದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಹೊಸ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವಳು ಗರ್ಭಿಣಿಯಾಗಿದ್ದಳು ಎಂದು ವೈದ್ಯರು ದೃಢಪಡಿಸಿದರು” ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಜೋನ್ 4 ವಿಜಯ್ ಸಿಂಗ್ ಗುರ್ಜರ್ ಹೇಳಿದರು.
ಹೆಚ್ಚಿನ ತನಿಖೆಯಿಂದ, ಆ ಬಾಲಕಿ ಇನ್ಸ್ಟಾಗ್ರಾಮ್‌ನಲ್ಲಿ 17 ವರ್ಷದ ಹುಡುಗನನ್ನು ಭೇಟಿಯಾಗಿದ್ದು ಮತ್ತು ಅವರ ನಡುವೆ ಸ್ನೇಹ ಬೆಳೆದಿತ್ತು ಎಂದು ತಿಳಿದುಬಂದಿದೆ.
“ಇಬ್ಬರೂ ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದಿದ್ದು, ಆ ಹುಡುಗ ಸೂರತ್‌ನ ಪಾಂಡೇಸರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಮತ್ತು ಅವರ ನಡುವೆ ದೈಹಿಕ ಸಂಬಂಧ ಬೆಳೆದಿದ್ದರಿಂದ ಬಾಲಕಿ ಗರ್ಭಿಣಿಯಾದಳು” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಆ ಹುಡುಗ ತನ್ನ ಹುಟ್ಟೂರಾದ ಉತ್ತರ ಪ್ರದೇಶಕ್ಕೆ ಮತ್ತು ನಂತರ ಮುಂಬೈಗೆ ಪಲಾಯನ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
“ಆ ಹುಡುಗ ಗರ್ಭಪಾತ ಮಾಡಿಕೊಳ್ಳಲು ಮಾತ್ರೆಗಳ ಪ್ಯಾಕೆಟ್ ಅನ್ನು ಆಕೆಗೆ ಕಳುಹಿಸಿದ್ದಾನೆ. ಅವಳು ಎರಡು ಮಾತ್ರೆಗಳನ್ನು ತೆಗೆದುಕೊಂಡು ಮನೆಯಲ್ಲಿ ಗರ್ಭಪಾತ ಮಾಡಿಕೊಂಡು ಭ್ರೂಣವನ್ನು ಎಸೆದಳು” ಎಂದು ಪೊಲೀಸ್ ಅಧಿಕಾರಿ ಬಾಲಕಿಯ ಮಾತನ್ನು ಉಲ್ಲೇಖಿಸಿ ಹೇಳಿದರು.
“ನಾವು ಅವರ (ಹುಡುಗ ಮತ್ತು ಬಾಲಕಿ) ಡಿಎನ್ಎ ಮಾದರಿಗಳನ್ನು ತೆಗೆದುಕೊಂಡಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿ ಹೇಳಿದರು.
ಆ ಹುಡುಗನನ್ನು ಬಂಧಿಸಲಾಗಿದೆ ಮತ್ತು ಅವನನ್ನು ಜೂವೆನೈಲ್ ಜಸ್ಟಿಸ್ ಬೋರ್ಡ್‌ನ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.