
ಬ್ರೆಜಿಲ್‌ನಲ್ಲಿ 14 ವರ್ಷದ ಬಾಲಕನೊಬ್ಬ ಸತ್ತ ನಂತರ, ಆತ ಚಿಟ್ಟೆಯ ಅವಶೇಷಗಳಿಂದ ತಯಾರಿಸಿದ ಮಿಶ್ರಣವನ್ನು ಚುಚ್ಚಿಕೊಂಡಿದ್ದನೆಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಸಾವಿಗೆ ಕಾರಣ ಹುಡುಕಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಕ್ಷಿಣ ಅಮೆರಿಕಾದ ಭಾಗಗಳಲ್ಲಿ ಪ್ರಸಾರವಾಗುತ್ತಿರುವ ಅಪಾಯಕಾರಿ ಸಾಮಾಜಿಕ ಮಾಧ್ಯಮ ಚಾಲೆಂಜ್‌ಗೆ ಈ ಸಾವು ಸಂಬಂಧಿಸಿರಬಹುದು ಎಂದು ಶಂಕಿಸಲಾಗಿದೆ. ಈ ಟ್ರೆಂಡ್‌ನಲ್ಲಿ ಸ್ಪರ್ಧಿ ಸತ್ತ ಚಿಟ್ಟೆಗಳನ್ನು ತಮ್ಮ ದೇಹಕ್ಕೆ ಚುಚ್ಚಿಕೊಳ್ಳುತ್ತಾರೆ ಎನ್ನಲಾಗಿದೆ.
ಡೇವಿ ನುನೆಸ್ ಮೊರೆರಾ ಎಂಬ ಬಾಲಕ, ಸತ್ತ ಚಿಟ್ಟೆಯ ಅವಶೇಷಗಳೊಂದಿಗೆ ನೀರನ್ನು ಬೆರೆಸಿ ತನ್ನ ಕಾಲಿಗೆ ಚುಚ್ಚಿಕೊಂಡಿದ್ದ. ಆತ ಮೊದಲು ತನ್ನ ತಂದೆಗೆ ಆಟವಾಡುವಾಗ ಗಾಯವಾಗಿರುವುದಾಗಿ ಹೇಳಿದ್ದ. ಆದರೆ, ವಾಂತಿ ಮತ್ತು ಕುಂಟುತನ ಕಾಣಿಸಿಕೊಂಡು ಅವನ ಸ್ಥಿತಿ ಹದಗೆಟ್ಟಿತು. ಆಗ ಆತ ನಿಜವಾಗಿ ಏನಾಯಿತು ಎಂದು ಒಪ್ಪಿಕೊಂಡ ನಂತರ ಪ್ಲಾನಾಲ್ಟೊದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅವನ ದಿಂಬಿನ ಕೆಳಗೆ ಸಿರಿಂಜ್ ಕೂಡಾ ಪತ್ತೆಯಾಗಿದೆ ಎಂದು ವರದಿಯಾಗಿದೆ.
ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಡೇವಿ ಆರೋಗ್ಯವು ಕ್ಷೀಣಿಸಿದ್ದು, ಅವನನ್ನು ವಿಟೋರಿಯಾ ಡಿ ಕಾನ್‌ಕ್ವಿಸ್ಟಾದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು, ಅಲ್ಲಿ ಅವನು ಒಂದು ವಾರ ತೀವ್ರವಾದ ನೋವನ್ನು ಅನುಭವಿಸಿ ಅಂತಿಮವಾಗಿ ಸಾವನ್ನಪ್ಪಿದ್ದಾನೆ.
ಸಾವಿನ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಕಾಯುತ್ತಿದ್ದಾರೆ. ಡೇವಿ ಸಾಮಾಜಿಕ ಮಾಧ್ಯಮ ಪ್ರವೃತ್ತಿಯಿಂದ ಪ್ರಭಾವಿತನಾಗಿದ್ದಾನೆಯೇ ಎಂಬುದನ್ನೂ ಅವರು ಪರಿಶೀಲಿಸುತ್ತಿದ್ದಾರೆ.