ಬಿಲಾಸ್‌ಪುರ: 3 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ ಮಾಡಿದ ಆರೋಪದ ಮೇಲೆ ಹದಿಹರೆಯದ ಹುಡುಗನನ್ನು ಬಂಧಿಸಲಾಗಿದ್ದು, ಸಾಕ್ಷ್ಯ ಮರೆಮಾಚಿದ್ದಕ್ಕಾಗಿ ಆತನ ಚಿಕ್ಕಪ್ಪನನ್ನು ಕೂಡ ಬಂಧಿಸಲಾಗಿದೆ.
ಭಾನುವಾರ ಸಂಜೆ ಛತ್ತೀಸ್ ಗಢದ ಬಿಲಾಸ್ ಪುರ ಜಿಲ್ಲೆಯ ಸಿರ್ಗಿಟ್ಟಿಯಲ್ಲಿ ಈ ಘಟನೆ ನಡೆದಿದೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಜನೇಶ್ ಸಿಂಗ್ ತಿಳಿಸಿದ್ದಾರೆ.
ತಂದೆ ಕೆಲಸದ ಮೇಲೆ ಹೊರಗಿದ್ದು, ಮನೆಯ ಬಳಿ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿದೆ. ನಂತರ ಆಕೆಯ ತಾಯಿ ಹುಡುಕಾಟ ನಡೆಸಿದ್ದಾರೆ. ಮಗು ಮತ್ತು 14 ವರ್ಷದ ಆರೋಪಿ ಶೌಚಾಲಯದ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ತಾಯಿ ಶೌಚಾಲಯದ ಬಾಗಿಲನ್ನು ಬಡಿದು ತೆರೆಯುವಂತೆ ಆರೋಪಿಯನ್ನು ಒತ್ತಾಯಿಸಿದ್ದಾರೆ. ನಂತರ ಬಾಲಕಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಬರುವಾಗಲೇ ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.
ನಾವು ಹುಡುಗನನ್ನು ಬಂಧಿಸಿ ಕೊಲೆಯ ಪ್ರಕರಣವನ್ನು ದಾಖಲಿಸಿದ್ದೇವೆ. ಸೋಮವಾರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಖಾಸಗಿ ಭಾಗಗಳಿಗೆ ಗಾಯಗಳು ಮತ್ತು ಆಕೆಯ ದೇಹದ ಮೇಲೆ ಉಗುರು ಮತ್ತು ಕಚ್ಚಿದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ, ವಿವಿಧ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಸಾಕ್ಷ್ಯ ಮರೆ ಮಾಚಿದ ಬಾಲಕನ ಚಿಕ್ಕಪ್ಪನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.