ಬೆಂಗಳೂರು: ಮಹಿಳಾ ಟೆಕ್ಕಿಯೊಬ್ಬರು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಪತಿಯ ವಿರುದ್ಧ ಅನುಮಾನ ವ್ಯಕ್ತವಾಗಿದೆ.
27 ವರ್ಷದ ಮೇಘನಾ ಶೆಟ್ಟಿ ಮೃತ ಮಹಿಳೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಮೇಘನಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಸುದೀಪ್ ಶೆಟ್ಟಿ ಜೊತೆ ವಿವಾಹವಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣುಮಗುವಿದೆ.
ಇದೀಗ ಮೇಘನಾ ಇದ್ದಕ್ಕಿದ್ದಂತೆ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೇಘನಾ ಶವ ಕಿಟಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿದೆ. ಇತ್ತೀಚೆಗೆ ಪತಿ ಸುದೀಪ್ ಶೆಟ್ಟಿ ಹಾಗೂ ಕುಟುಂಬದವರು ಹಣಕ್ಕಾಗಿ ಪೀಡಿಸುತ್ತಿದ್ದರಂತೆ. ನಿನ್ನೆ ರಾತ್ರಿ ಕೂಡ ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿದೆ ಎಂದು ತಿಳಿದುಬಂದಿದೆ. ಇದೀಗ ಕಿಟಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೇಘನಾ ಪತ್ತೆಯಾಗಿದ್ದು, ಪತಿ ಸುದೀಪ್ ಹಾಗೂ ಮನೆಯವರೇ ಮೇಘನಾಳನ್ನು ಕೊಲೆಗೈದಿದ್ದಾಗಿ ಮೇಘನಾ ಪೋಷಕರು ಆರೋಪಿಸಿದ್ದಾರೆ.
ಅಲ್ಲದೇ ಸುದೀಪ್ ಶೆಟ್ಟಿ ಹಾಗೂ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಮೇಘನಾ ತಂದೆ-ತಾಯಿ ಆರೋಪಿಸಿದ್ದಾರೆ. ಸದ್ಯ ಮೇಘನಾ ಪತಿ ಸುದೀಪ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.