
ಮುಂದಿನ ತಿಂಗಳು T20 ವಿಶ್ವಕಪ್ ನಿಗದಿಯಾಗಿದ್ದು ಅಭಿಮಾನಿಗಳು ವಿಶ್ವಮಟ್ಟದ ಈ ಕ್ರಿಕೆಟ್ ಹಬ್ಬ ನೋಡಲು ಕಾತರರಾಗಿದ್ದಾರೆ. ಈ ಬಾರಿ ಪಂದ್ಯಾವಳಿಯನ್ನು ವೆಸ್ಟ್ ಇಂಡೀಸ್ ಮತ್ತು ಯುಎಸ್ ಜಂಟಿಯಾಗಿ ಆಯೋಜಿಸುತ್ತದ್ದು,. ಬಿಸಿಸಿಐ ಈಗಾಗಲೇ ಟೀಂ ಇಂಡಿಯಾದ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ತಂಡದಲ್ಲಿ ಕೆಲವು ಅಚ್ಚರಿ ವಿಷಯಗಳಿರುವಂತೆ ಭಾರತ ತಂಡದ ಜೆರ್ಸಿಯು ಕೂಡ ಕೆಲವು ಅಚ್ಚರಿ ತಂದಿದೆ. ಪ್ರತಿ ಬಾರಿ ಜೆರ್ಸಿಯನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಜೆರ್ಸಿ ಸೋರಿಕೆ ಆಗಿದೆ. ಜೊತೆಗೆ ಜೆರ್ಸಿಯ ವಿನ್ಯಾಸ ಬೇಸರ ತರಿಸಿದ್ದು ಉತ್ತಮವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಡಿಡಾಸ್ BCCI ಯ ಅಧಿಕೃತ ಕಿಟ್ ಪ್ರಾಯೋಜಕರಾಗಿದ್ದಾರೆ ಮತ್ತು ಅವರು ODI ಮತ್ತು T20 ಗಳಿಗೆ ವಿಭಿನ್ನ ಕಿಟ್‌ಗಳನ್ನು ತಯಾರಿಸುತ್ತಿದ್ದಾರೆ. ODI ಜರ್ಸಿಯು ಕಾಲರ್ ಹೊಂದಿದ್ದು ಹುಲಿಯ ಪಟ್ಟೆಗಳನ್ನು ತೋರಿಸುತ್ತಿದೆ. T20I ಜೆರ್ಸಿಯು ಅಶೋಕ ಚಕ್ರದ ಚಿತ್ರ ಹೊಂದಿದ್ದು ಎರಡೂ ಜೆರ್ಸಿಗಳು ಭುಜದ ಮೇಲೆ ಪಟ್ಟೆಗಳನ್ನು ಹೊಂದಿವೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು ಜೆರ್ಸಿ ನೋಡಲು ಕುತೂಹಲಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ವಿ-ಆಕಾರದ ಕುತ್ತಿಗೆಯ ಜೆರ್ಸಿಯ ಮೇಲೆ ಕೇಸರಿ, ಬಿಳಿ, ಹಸಿರು ಮೂರುಬಣ್ಣದ ಪಟ್ಟಿಗಳನ್ನು ಕಾಣಬಹುದು. ಕೇಸರಿ ಬಣ್ಣದ ತೋಳಿನ ಅಡೀಡಸ್ ಪಟ್ಟಿಗಳನ್ನು ತೋರಿಸುತ್ತದೆ.
ಇದು ನಿಜವಾಗಿ ಜೆರ್ಸಿಯಾಗಿದ್ದರೆ, ಇದನ್ನು ಬಿಸಿಸಿಐ ಮತ್ತು ಅಡೀಡಸ್‌ನ ಕಡೆಯಿಂದ ದೊಡ್ಡ ಅನಾಹುತ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಜೆರ್ಸಿ ಅನಾವರಣಗಳು ಸಾಮಾನ್ಯವಾಗಿ ಸಸ್ಪೆನ್ಸ್ ನಿಂದ ಕೂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿರುತ್ತವೆ.
ವೈರಲ್ ಫೋಟೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಚೆನ್ನಾಗಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿ ಇದನ್ನು ‘ತರಬೇತಿ ಕಿಟ್’ ಎಂದು ಕರೆದಿದ್ದಾರೆ. ಕೆಲವರು “ಕೆಟ್ಟದಾಗಿದೆ” ಎಂದಿದ್ದಾರೆ.
ರೋಹಿತ್ ಶರ್ಮಾ ಐಸಿಸಿ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲಿದ್ದು ರಿಷಬ್ ಪಂತ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳಿದ್ದಾರೆ.