ಬೆಂಗಳೂರು : ಮಳೆಯಿಂದಾಗಿ ಧರೆಗುರುಳಿದ ಮರಗಳು, ರೆಂಬೆ – ಕೊಂಬೆಗಳನ್ನು ತೆರವುಗೊಳಿಸಲು ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು 28 ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ʼಮರಗಳ ವ್ಯವಸ್ಥಿತ ನಿರ್ವಹಣಾ ತಂಡʼ ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ರಚಿಸಲಾಗಿರುವ ‘ಮರಗಳ ವ್ಯವಸ್ಥಿತ ನಿರ್ವಹಣೆ ತಂಡ’ದಲ್ಲಿ, ಮರ ಹಾಗೂ ರೆಂಬೆಗಳನ್ನು ತೆರವುಗೊಳಿಸುವ ಉಪಕರಣಗಳೊಂದಿಗೆ ನೈಪುಣ್ಯ ಹೊಂದಿರುವ ಒಟ್ಟು 8 ಸಿಬ್ಬಂದಿ ಇರುತ್ತಾರೆ. ಮರ, ಕೊಂಬೆಗಳ ತ್ಯಾಜ್ಯವನ್ನು ಸಾಗಿಸಲು ಚಾಲಕಸಹಿತ ಒಂದು ದೊಡ್ಡ ವಾಹನ ನಿಯೋಜಿಸಲಾಗಿದೆ.
ಸಾರ್ವಜನಿಕರು ಸಹಾಯ ಆ್ಯಪ್, ನಿಯಂತ್ರಣ ಕೊಠಡಿ ಅಥವಾ ನೇರವಾಗಿ ಬಿಬಿಎಂಪಿ ಕಚೇರಿಗಳಿಗೆ ದೂರುಗಳನ್ನು ನೀಡಬಹುದು. ವಲಯದ ಜಂಟಿ ಆಯುಕ್ತರು, ವಲಯ ಮಟ್ಟದ ಅರಣ್ಯಾಧಿಕಾರಿಗಳು ಹಾಗೂ ಕೇಂದ್ರ ಕಚೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸುವಂತೆ ತಂಡಗಳು ಕಾರ್ಯನಿರ್ವಹಿಸುತ್ತವೆ. ಪ್ರತಿ ದಿನ ಮಾಡಿದ ಕೆಲಸಗಳ ಕುರಿತು ದಾಖಲೆ ನಿರ್ವಹಿಸಬೇಕು. ತಂಡಗಳ ವಿರುದ್ಧ ಯಾವುದೇ ದೂರುಗಳು ಬಂದಲ್ಲಿ ವಲಯ ಮಟ್ಟದ ಅರಣ್ಯಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.