
ಬೆಂಗಳೂರು: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಅಂತರ ವಿಭಾಗ ಮಟ್ಟದ ಕೋರಿಕೆ, ಪರಸ್ಪರ ವರ್ಗಾವಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದೆ. ಆಗಸ್ಟ್ 17ರಿಂದ ಪ್ರಕ್ರಿಯೆ ಆರಂಭವಾಗಲಿದೆ.
ಆಗಸ್ಟ್ 17, 19, 20 ಮತ್ತು 27 ರಂದು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು. ವರ್ಗಾವಣೆಗೆ ಈಗಾಗಲೇ ಪ್ರಕಟಿಸಿರುವ ಆದ್ಯತಾಪಟ್ಟಿಗೆ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ತಾವು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಎಲ್ಲಾ ಮೂಲ ದಾಖಲೆಗಳೊಂದಿಗೆ ಕೌನ್ಸೆಲಿಂಗ್ ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವುದು ಎಂದು ತಿಳಿಸಲಾಗಿದೆ.
ಆಗಸ್ಟ್ 17ರಂದು ಎಲ್ಲಾ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಹಾಗೂ 1ರಿಂದ 300 ರವರೆಗೆ ಅದ್ಯತಾ ಕ್ರಮಾಂಕದ ಸಹ ಶಿಕ್ಷಕರಿಗೆ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.
ಆಗಸ್ಟ್ 19 ರಂದು 301 ರಿಂದ 800 ರವರೆಗಿನ ಅದ್ಯತಾ ಕ್ರಮಾಂಕದ ಸಹ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಸಲಾಗುವುದು. ಆಗಸ್ಟ್ 20ರಂದು 801 ರಿಂದ ಕ್ರಮಾಂಕ ಮುಕ್ತಾಯವಾಗುವವರೆಗೆ ಕೌನ್ಸೆಲಿಂಗ್ ನಡೆಸಲಾಗುವುದು. ಅದೇ ರೀತಿ ಆಗಸ್ಟ್ 27ರಂದು ಪರಸ್ಪರ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.