ನವದೆಹಲಿ: ಅಕ್ರಮದ ಕಾರಣದಿಂದ ಪಶ್ಚಿಮ ಬಂಗಾಳದ 25,000 ಶಿಕ್ಷಕರ ನೇಮಕಾತಿ ರದ್ದು ಮಾಡಿ ಕೊಲ್ಕತ್ತಾ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ, ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ತನಿಖೆಗೆ ಸಿಬಿಐ ನೇಮಕ ಮಾಡಿದ್ದ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.
ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ 25,000 ಶಿಕ್ಷಕರು ನಿರಾಳರಾಗಿದ್ದಾರೆ. ಮತ್ತೊಂದೆಡೆ ಅಕ್ರಮದ ಆರೋಪ ಹೊತ್ತಿರುವ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಅಕ್ರಮವಾಗಿ ಶಿಕ್ಷಕರ ಹುದ್ದೆಗೆ ನೇಮಕ ಆದವರು ಮತ್ತು ಸಕ್ರಮವಾಗಿ ನೇಮಕ ಆದವರನ್ನು ಪ್ರತ್ಯೇಕಗೊಳಿಸುವ ಅವಕಾಶ ಇರುವ ಕಾರಣ ಏಕಪಕ್ಷಿಯವಾಗಿ ಎಲ್ಲಾ ನೇಮಕಾತಿ ರದ್ದು ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿ ನೇಮಕಾತಿ ರದ್ದು ಆದೇಶಕ್ಕೆ ತಡೆ ನೀಡಿದೆ. ಅಕ್ರಮವಾಗಿ ನೇಮಕವಾದ ಎಲ್ಲಾ ಶಿಕ್ಷಕರು ಪೂರ್ಣ ವೇತನವನ್ನು ಮರಳಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.