ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಪೋಷಕರ ಆದಾಯ ಪ್ರಮಾಣ ಪತ್ರ ಸಲ್ಲಿಸಿದ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ಕೂಡ ಪರಿಗಣಿಸಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. 2022ರ ಮಾರ್ಚ್ ನಲ್ಲಿ 15,000 ಪದವೀಧರ ಪ್ರಾಥಮಿಕ ಶಿಕ್ಷಕರು(ಆರರಿಂದ ಎಂಟನೇ ತರಗತಿ) ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, 68.849 ಅಭ್ಯರ್ಥಿಗಳು ಸಿಇಟಿ ಬರೆದಿದ್ದು, 13,363 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗಿತ್ತು.
ಅನೇಕ ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದ ಕಾರಣಕ್ಕೆ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಅವರನ್ನು ಕೈಬಿಡಲಾಗಿದ್ದು, ಇದನ್ನು ಪ್ರಶ್ನಿಸಿ 300ಕ್ಕೂ ಅಧಿಕ ಮಹಿಳಾ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮ ತೀರ್ಪಿಗೆ ಒಳಪಡುವ ಷರತ್ತಿನ ಮೇಲೆ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಹೀಗಾಗಿ ಆಯ್ಕೆಯಾದ ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೂ ಅಂತಿಮ ತೀರ್ಪಿನ ಬದ್ಧತೆಯ ಷರತ್ತಿಗೆ ಒಳಪಟ್ಟು ಸಹಿ ಮಾಡಿಸಿಕೊಂಡು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.