ಗೋಲ್ಡನ್ ಸಿಟಿ ಎಂದು ಕರೆಯಲ್ಪಡುವ ರಾಜಸ್ತಾನದ ಛೋಟಿಸದ್ರಿಯಲ್ಲಿ ಮಹಿಳೆಯೊಬ್ಬಳ ಭಕ್ತಿಯ ಪರಾಕಾಷ್ಠೆ ಅಚ್ಚರಿಗೆ ಕಾರಣವಾಗಿದೆ. ಪ್ರತಾಪಗಢ ಜಿಲ್ಲೆಯ ಛೋಟಿಸದ್ರಿಯ ಸರ್ಕಾರಿ ಶಿಕ್ಷಕಿಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಜೈನ ಸಾಧ್ವಿಯಾಗಲು ನಿರ್ಧರಿಸಿದ್ದಾರೆ. ಈ ಮಹಿಳೆಯ ಹೆಸರು ಪ್ರೀತಿ. ಇಷ್ಟೇ ಅಲ್ಲ 40 ವರ್ಷದ ಪ್ರೀತಿ ಒಬ್ಬರೇ ದೀಕ್ಷೆ ತೆಗೆದುಕೊಳ್ಳುತ್ತಿಲ್ಲ ಜೊತೆಗೆ ಪುಟ್ಟ ಮಗಳನ್ನೂ ಸೇರಿಸಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ದೀಕ್ಷೆ ಪಡೆದ ಸಾಧ್ವಿ !
ಶಿಕ್ಷಕಿ ಪ್ರೀತಿಯ ಮಗಳು ಸಾರಾಗೆ ಕೇವಲ 11 ವರ್ಷ, ಇನ್ಮುಂದೆ ಬಾಲಕಿ ಕೂಡ ಜೈನ ಸಾಧ್ವಿಯಾಗಿ ಬದುಕಲಿದ್ದಾರೆ. ಸಾರಾ ಹಾಗೂ ಪ್ರೀತಿ ಇಬ್ಬರೂ ಏಪ್ರಿಲ್ 21 ರಂದು ಜೈನ ಸಾಧ್ವಿಗಳಾಗಿ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಇದರೊಂದಿಗೆ ಸಾರಾ ಅತ್ಯಂತ ಕಿರಿಯ ‘ಸನ್ಯಾಸಿನಿ’ ಎನಿಸಿಕೊಳ್ಳಲಿದ್ದಾರೆ.
ಪ್ರೀತಿಗೆ ಈ ಮೊದಲೇ ದೀಕ್ಷೆ ಪಡೆಯುವ ಹಂಬಲವಿತ್ತು. ಆದರೆ ಕುಟುಂಬದವರು ಒಪ್ಪಿರಲಿಲ್ಲ. ಆದ್ರೀಗ ಈ ಕಠಿಣ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಏಪ್ರಿಲ್ 21 ರಂದು ಸಕಲ ಜೈನ ಶ್ರೀ ಸಂಘದ ಸಂತರ ಸಮ್ಮುಖದಲ್ಲಿ ಪ್ರೀತಿ ಬೆನ್ ಮತ್ತು ಸಾರಾ ದೀಕ್ಷೆ ಪಡೆದುಕೊಳ್ಳಲಿದ್ದು, ಸಮಾರಂಭದ ನಂತರ ಇಬ್ಬರೂ ತಮ್ಮ ನಗರವನ್ನು ತೊರೆಯಲಿದ್ದಾರೆ.
ದೀಕ್ಷೆ ಎಂದರೆ ಪ್ರಪಂಚದಿಂದ ನಿರ್ಲಿಪ್ತರಾಗಿ ಸಂಯಮ, ಮೋಕ್ಷದ ಮಾರ್ಗದಲ್ಲಿ ಮುನ್ನಡೆಯುವುದು. ಬದುಕನ್ನು ಮೋಕ್ಷ ಪಡೆಯುವ ದಿಕ್ಕಿನಲ್ಲಿ ಕೊಂಡೊಯ್ಯುವುದಾಗಿದೆ. ಈ ರೀತಿ ದೀಕ್ಷೆ ಪಡೆದ ಜೈನ ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಬದುಕು ತುಂಬಾ ಕಷ್ಟಕರವಾಗಿರುತ್ತದೆ. ಅವರು ಚಪ್ಪಲಿ ಧರಿಸುವಂತಿಲ್ಲ, ಹಾಸಿಗೆಯ ಮೇಲೆ ಮಲಗುವುದಿಲ್ಲ. ಆಹಾರವನ್ನು ಬೇಡಿ ತಿನ್ನಬೇಕು. ನೆಲದ ಮೇಲೆ ಮಲಗಬೇಕು, ಬರಿಗಾಲಿನಲ್ಲಿಯೇ ಪ್ರಯಾಣಿಸಬೇಕು. ದುರಾಸೆ, ಮೋಹ, ಭ್ರಮೆ ಇತ್ಯಾದಿಗಳನ್ನು ತೊರೆದು ಸಂಯಮದ ಮಾರ್ಗವನ್ನು ಅನುಸರಿಸಬೇಕು.