ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ‘2ರ ಗುಣಾಕಾರ ಕೋಷ್ಟಕ’ ಮರೆತಿದ್ದಕ್ಕಾಗಿ 5ನೇ ತರಗತಿ ವಿದ್ಯಾರ್ಥಿನಿ ಕೈಯನ್ನು ಕೊರೆದಿದ್ದಾನೆ.
ಟೇಬಲ್ ಓದದ ಕಾರಣ ಶಿಕ್ಷೆ ನೀಡಲು ಹಾಗೆ ಮಾಡಿದ್ದಾನೆ. ವಿದ್ಯಾರ್ಥಿನಿ ಕಾನ್ಪುರ ಜಿಲ್ಲೆಯ ಪ್ರೇಮ್‌ನಗರದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸಿಸಾಮೌ ನಿವಾಸಿಯಾಗಿದ್ದಾಳೆ. ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಶಿಕ್ಷಕರು(ಹೆಸರು ಹೇಳಲಾಗಿಲ್ಲ) ನನಗೆ ‘ಟೇಬಲ್ 2’ ಅನ್ನು ಹೇಳುವಂತೆ ಹೇಳಿದರು. ನಾನು ಹೇಳಲು ವಿಫಲವಾದ ಕಾರಣ, ಅವರು ನನ್ನ ಕೈಯನ್ನು ಕೊರೆದರು. ನನ್ನ ಪಕ್ಕದಲ್ಲಿ ನಿಂತಿದ್ದ ಸಹ ವಿದ್ಯಾರ್ಥಿ ತಕ್ಷಣ ಡ್ರಿಲ್ ಅನ್ನು ಬಿಚ್ಚಿದ ಎಂದು ತಿಳಿಸಿದ್ದಾಳೆ.
ಘಟನೆಯ ಬಗ್ಗೆ ತಿಳಿದು, ಆಕ್ರೋಶಗೊಂಡ ಸಂತ್ರಸ್ತೆಯ ಸಂಬಂಧಿಕರು ಶಾಲೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಪ್ರಭಾರಿ ಶಿಕ್ಷಕರು ಘಟನೆಯ ಬಗ್ಗೆ ಸ್ಥಳೀಯ ಶಿಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಕುಟುಂಬಸ್ಥರು ಬಂದ ನಂತರವೇ ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಮಾಹಿತಿ ಪಡೆದ ಮೂಲ ಶಿಕ್ಷಣಾಧಿಕಾರಿ ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಕಾನ್ಪುರ ನಗರದ ಮೂಲ ಶಿಕ್ಷಾ ಅಧಿಕಾರಿ ಸುಜಿತ್ ಕುಮಾರ್ ಸಿಂಗ್, ಈ ಸಂಪೂರ್ಣ ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ, ಪ್ರೇಮ್ ನಗರ ಮತ್ತು ಶಾಸ್ತ್ರಿನಗರದ ಬ್ಲಾಕ್ ಶಿಕ್ಷಣ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಕಳುಹಿಸುತ್ತಾರೆ. ತಪ್ಪಿತಸ್ಥರು ಶಿಕ್ಷಾರ್ಹ ಕ್ರಮವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.