ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆಗೆ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಫೆಬ್ರವರಿ 28ಕ್ಕೆ ಪೂರ್ಣಗೊಳ್ಳಬೇಕಿದ್ದ ವರ್ಗಾವಣೆ ಪ್ರಕ್ರಿಯೆ ಮಾರ್ಚ್ 10 ರಂದು ಪೂರ್ಣಗೊಳ್ಳಲಿದೆ.
ಜನವರಿ 12 ರಿಂದ 16 ರವರೆಗೆ ಹೆಚ್ಚುವರಿ ಶಿಕ್ಷಕರು ಸಲ್ಲಿಸಿದ ಆದ್ಯತೆಯ ಅಲ್ಲಿನ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಕರಡುಪಟ್ಟಿಯಿಂದ ತೊಂದರೆಗೆ ಒಳಗಾದ ಶಿಕ್ಷಕರು ಜನವರಿ 16ರಂದು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ಮರು ಹಂಚಿಕೆಗೆ ಕೌನ್ಸೆಲಿಂಗ್ ಗೆ ಅರ್ಹರಾದ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಜನವರಿ 23 ರಂದು ಪ್ರಕಟಿಸಲಾಗುವುದು. ಜನವರಿ 24ರಂದು ಬ್ಲಾಕ್ ಹಂತದಲ್ಲಿ ಸಮರ್ಪಕ ಮರು ಹೊಂದಾಣಿಕೆ ಕೌನ್ಸೆಲಿಂಗ್ ನಡೆಯುತ್ತದೆ. ಜನವರಿ 30ರಂದು ಜಿಲ್ಲಾ ಹಂತದಲ್ಲಿ ಮರು ಹೊಂದಾಣಿಕೆ ಕೌನ್ಸೆಲಿಂಗ್ ನಡೆಸಲಾಗುವುದು. ಫೆಬ್ರವರಿ 17ರಂದು ತಾಂತ್ರಿಕ ಸಹಾಯಕರ ಗಣಕೀಕೃತ ಕೌನ್ಸೆಲಿಂಗ್ ನಡೆಸಲಾಗುವುದು.
ಫೆಬ್ರವರಿ 17 ರಿಂದ ವಿಭಾಗಿಯ ಹಂತದ ಪ್ರಕ್ರಿಯೆಗಳು, ಮಾರ್ಚ್ 1 ರಿಂದ ಅಂತರವಿಭಾಗೀಯ ಹಂತದ ಪ್ರಕ್ರಿಯೆಗಳು ನಡೆಯುತ್ತವೆ. ಮಾರ್ಚ್ 10ರಂದು ಅಂತಿಮ ಜೇಷ್ಠತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಹೇಳಲಾಗಿದೆ.