ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪತ್ರ ಬರೆದಿದೆ.
ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರವೂ ಶಾಲಾ ಶಿಕ್ಷಕರ ವರ್ಗಾವಣೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಪತ್ರ ಬರೆದಿದ್ದಾರೆ.
ಈಗಾಗಲೇ ವರ್ಗಾವಣೆ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿದ್ದು, ತಾಂತ್ರಿಕ ಕಾರಣದಿಂದ ತಡೆ ನೀಡಲಾಗಿದೆ. 88,324 ಶಿಕ್ಷಕರು ವರ್ಗಾವಣೆಗೆ ಅರ್ಜಿ ಹಾಕಿದ್ದಾರೆ. ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಮತ್ತು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಮುಂದುವರೆಸಲು ಅನುಮತಿ ನೀಡಲಾಗಿದ್ದು, ವರ್ಗಾವಣೆಯಾದ ಸ್ಥಳಕ್ಕೆ ನೂತನ ಶೈಕ್ಷಣಿಕ ವರ್ಷ ಆರಂಭದಿಂದ ಕರ್ತವ್ಯಕ್ಕೆ ಹಾಜರಾಗವು ಷರತ್ತಿಗೆ ಒಳಪಟ್ಟು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ.