ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕರ್ನಾಟಕ ಆಡಳಿತ ನ್ಯಾಯ ಮಂಡಳಿ(ಕೆಎಟಿ) ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ದ ಶಿಕ್ಷಕರಿಗೆ ವಿಶೇಷ ಆದ್ಯತೆ ನೀಡುವ ಸರ್ಕಾರದ ಅಧಿಸೂಚನೆ ಕೆಎಟಿ ರದ್ದುಪಡಿಸಿದ್ದು ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
ವರ್ಗಾವಣೆಯಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ ಆದ್ಯತೆ ನೀಡುವ ನಿಯಮ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನವೆಂಬರ್ 11 ರಂದು ಅಧಿಸೂಚನೆ ಹೊರಡಿಸಿ ಅವಕಾಶ ಕಲ್ಪಿಸಿದೆ. ಕಾಯ್ದೆಯಲ್ಲಿ ಇಲ್ಲದಿದ್ದರೂ ಆದ್ಯತೆಯನ್ನು ನೀಡುವುದಾದರೆ ತಮಗೂ ಆದ್ಯತೆ ನೀಡುವಂತೆ 2016 -17 ರಲ್ಲಿ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರು ಕೆಎಟಿಗೆ ಅರ್ಜಿ ಸಲ್ಲಿಸಿದ್ದಾರೆ. ಕೆಎಟಿ ಅಧಿಸೂಚನೆ ರದ್ದುಪಡಿಸಿದೆ.
ಇದರಿಂದಾಗಿ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ನಿರಾಸೆಯಾಗಿದ್ದು, ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ. ಸುಮಾರು 70 ಸಾವಿರಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸರ್ಕಾರದಿಂದ ಹೊರಡಿಸಲಾದ ಅಧಿಸೂಚನೆಯಂತೆ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಬೇಕೆಂದು ಹೈಕೋರ್ಟ್ ಗೆ ಮನವಿ ಮಾಡಲಾಗಿದೆ. ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಒಂದು ಬಾರಿಗೆ ಮಾತ್ರ ಅವಕಾಶ ನೀಡುವಂತೆ ಮನವಿ ಮಾಡಲಾಗಿದ್ದು, ಹೈಕೋರ್ಟ್ ವಿಚಾರಣೆ ಆಲಿಸಿ ಅವಕಾಶ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ.