ಬೆಂಗಳೂರು: ಅನೇಕ ಕಾರಣಗಳಿಂದ ವಿಳಂಬವಾಗಿದ್ದ ಶಿಕ್ಷಕರ ವರ್ಗಾವಣೆ ಸುಖಾಂತ್ಯಗೊಂಡಿದೆ. 30,000 ಶಿಕ್ಷಕರು ಈ ಬಾರಿ ವರ್ಗಾವಣೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಕಳೆದ 3-4 ವರ್ಷಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 30,629 ಶಿಕ್ಷಕರು ವರ್ಗಾವಣೆಯ ಪ್ರಯೋಜನ ಪಡೆದುಕೊಂಡಿದ್ದಾರೆ. 2021ಕ್ಕೆ ಹೋಲಿಸಿದರೆ ವರ್ಗಾವಣೆ ಲಾಭ ಪಡೆದ ಶಿಕ್ಷಕರ ಸಂಖ್ಯೆ ಈ ವರ್ಷ 10,000 ದಷ್ಟು ಹೆಚ್ಚಾಗಿದೆ. 2021 ರಲ್ಲಿ 20,304 ಶಿಕ್ಷಕರು ವರ್ಗಾವಣೆಯಾಗಿದ್ದರು. ಈ ವರ್ಷ ವರ್ಗಾವಣೆಗಾಗಿ 73,785 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. 23,747 ಪ್ರಾಥಮಿಕ ಶಾಲೆ ಶಿಕ್ಷಕರು, 6,882 ಪ್ರೌಢಶಾಲೆ ಶಿಕ್ಷಕರು ಸೇರಿ 30,629 ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ.
ರಾಜ್ಯ ಸಿವಿಲ್ ಸೇವೆಗಳು -ಶಿಕ್ಷಕರ ವರ್ಗಾವಣೆ ನಿಯಂತ್ರಣ ನಿಯಮ 2022ಕ್ಕೆ ತಿದ್ದುಪಡಿ ತಂದು ಕನಿಷ್ಠ 10 ವರ್ಷ ಒಂದೇ ಕಡೆ ಕಾರ್ಯ ನಿರ್ವಹಿಸಿದವರಿಗೂ ವರ್ಗಾವಣೆ ನೀಡಲು ಮುಂದಾದ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಮಾಣ ಹೆಚ್ಚಾಗಿದೆ. ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕರಿಗೆ ಅನುಕೂಲವಾಗಿದೆ. ಈ ಬಾರಿ ತಂತ್ರಾಂಶದಲ್ಲಿ ಯಾವುದೇ ತೊಂದರೆಯಾಗದಂತೆ ವರ್ಗಾವಣೆ ಮಾಡಲಾಗಿದೆ. ಆನ್ಲೈನ್ ಮೂಲಕವೇ ಎಲ್ಲವೂ ನಡೆದಿದ್ದು, ಪಾರದರ್ಶಕತೆ, ಕಾಯ್ದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.