ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದ್ದು, ವರ್ಗಾವಣೆಗಾಗಿ ಕಾಯುತ್ತಿದ್ದ ಶಿಕ್ಷಕರಿಗೆ ಮತ್ತೆ ನಿರಾಸೆ ಎದುರಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಚುನಾವಣಾ ಆಯೋಗ ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಲು ನಿರಾಕರಿಸಿದೆ. ಇದರಿಂದಾಗಿ ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕರ ಜೊತೆಗೆ 15,000 ಹೊಸ ಶಿಕ್ಷಕರಿಗೆ ಸ್ಥಳ ನಿಯೋಜನೆ ಮೇಲೆಯೂ ಪರಿಣಾಮ ಉಂಟಾಗಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಕರ ವರ್ಗಾವಣೆಗೆ ಆಯೋಗದ ಅನುಮತಿ ಪಡೆದು ನಂತರ ವರ್ಗಾವಣೆ ಪ್ರಕ್ರಿಯೆ ನಡೆಸಲು ತೀರ್ಮಾನ ಕೈಗೊಂಡಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಕಾರಣದಿಂದ ಶಿಕ್ಷಕರ ವರ್ಗಾವಣೆಗೆ ಆಯೋಗ ಅನುಮತಿ ನೀಡಿಲ್ಲ. ಹೊಸ ಸರ್ಕಾರ ಬರುವವರೆಗೆ ವರ್ಗಾವಣೆ ಪ್ರಕ್ರಿಯೆ ನನೆಗುದಿಗೆ ಬೀಳಲಿದೆ. ಇದರೊಂದಿಗೆ 15,000 ಶಿಕ್ಷಕರ ಸ್ಥಳ ನಿಯೋಜನೆ ಮೇಲೆಯೂ ಪರಿಣಾಮ ಉಂಟಾಗಲಿದೆ ಎಂದು ಹೇಳಲಾಗಿದೆ.