ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಆರಂಭಿಸುವ ಮೊದಲು ಪ್ರಾಥಮಿಕ, ಮುಖ್ಯ, ಪ್ರೌಢಶಾಲೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಪ್ರಕ್ರಿಯೆ ಸಿದ್ದತೆ ಕೈಗೊಂಡು ವರ್ಗಾವಣೆ ಕರಡು ಆಧಿಸೂಚನೆ ಹೊರಡಿಸಲಾಗಿದೆ.
ಶಾಲೆಗಳಲ್ಲಿ ಮಂಜೂರಾದ ಹುದ್ದೆಗಳಿಗಿಂತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ ಮತ್ತು ಹುದ್ದೆ ಮಂಜೂರಾಗದೆ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಶಿಕ್ಷಕರನ್ನು ಸ್ಥಳಾಂತರಿಸಬೇಕಿದೆ. ಈ ಕಾರಣದಿಂದ ಹೆಚ್ಚುವರಿ ಆಗುವ ಶಿಕ್ಷಕರಿಗೆ ವಿನಾಯಿತಿ ನೀಡಬೇಕು ಮತ್ತು ಯಾವ ಶಿಕ್ಷಕರನ್ನು ವರ್ಗಾಯಿಸಬೇಕು ಎಂಬುದನ್ನು ಗುರುತಿಸಿ ವರ್ಗಾವಣೆ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಅರ್ಹ ಶಿಕ್ಷಕರನ್ನು ಗುರುತಿಸಲು ಮತ್ತು ಅರ್ಹ ಶಿಕ್ಷಕರಿಗೆ ವಿನಾಯಿತಿ ನೀಡಲು ಅವಕಾಶ ಕಲ್ಪಿಸಬೇಕಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನ್ವಯ ತಿದ್ದುಪಡಿ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದೆ.
ಗರ್ಭಿಣಿ ಶಿಕ್ಷಕರು, ವಿಕಲಚೇತನ ಶಿಕ್ಷಕರು, ಕಾಯಿಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೀಸಲಾತಿ ಪಡೆಯುವವರ ಸಂಬಂಧಿತ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ. ಒಮ್ಮೆ ಪಟ್ಟಿ ಪ್ರಕಟವಾದ ನಂತರ ಕೌನ್ಸೆಲಿಂಗ್ ನಲ್ಲಿ ಆದ್ಯತೆ ಕ್ಲೇಮ್ ಮಾಡಲು ಅವಕಾಶ ಇರುವುದಿಲ್ಲ.
ಆರೋಗ್ಯಕ್ಕೆ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಿಲ್ಲಾ ಮಟ್ಟದ ತ್ರಿಸದಸ್ಯ ವೈದ್ಯಕೀಯ ಮಂಡಳಿ ರಚಿಸಿ ತಪಾಸಣೆಗೆ ಒಳಪಡಿಸಬೇಕೆಂದು ಹೇಳಲಾಗಿದೆ. ಆದ್ಯತಾ ಕರಡು ಪಟ್ಟಿಯನ್ನು ಡಿಸೆಂಬರ್ 20ರಂದು ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.