ಬೆಂಗಳೂರು: ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆದ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ 2022ರ ಪ್ರಕಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇಂದು ಆರಂಭವಾಗಲಿದೆ.
ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿಯನ್ನು ಇಂದು ಪ್ರಕಟಿಸಲಾಗುವುದು. ಡಿಸೆಂಬರ್ 30ರೊಳಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬೇಕಿದ್ದು, ಡಿಸೆಂಬರ್ 31ರ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಕ್ಷೇಪಣೆ ಅಂಗೀಕಾರ ಅಥವಾ ತಿರಸ್ಕಾರ ಪೂರ್ಣಗೊಳಿಸಬೇಕಿದೆ.
ಹೆಚ್ಚುವರಿ ಶಿಕ್ಷಕರ ಪಟ್ಟಿ ಅಂಗೀಕಾರ ಅಥವಾ ತಿರಸ್ಕಾರವನ್ನು ಜನವರಿ 2ರೊಳಗೆ ಪ್ರಕಟಿಸಬೇಕು. ಶಿಕ್ಷಕರ ಸಮಸ್ಯೆಗಳಿದ್ದಲ್ಲಿ ಜನವರಿ 2ರ ಒಳಗೆ ಕುಂದುಕೊರತೆ ನಿವಾರಣೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಜನವರಿ 9 ರವರೆಗೆ ಹೆಚ್ಚುವರಿ ಶಿಕ್ಷಕರು ಸಲ್ಲಿಸಿದ ದಾಖಲೆಗಳ ಪರಿಶೀಲನೆ, ಅಂಗೀಕಾರ, ತಿರಸ್ಕಾರ ಪ್ರಕ್ರಿಯೆ ನಡೆಯಲಿದೆ.
ಜನವರಿಗೆ 11ರಂದು ಕರಡು ಜೇಷ್ಠತಾ ಪಟ್ಟಿ ಪ್ರಕಟಿಸಲಿದ್ದು, ಜನವರಿ 12ರಂದು ವೃಂದವಾರು ಖಾಲಿ ಹುದ್ದೆಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ನಂತರ ವರ್ಗಾವಣೆ ಪ್ರಕ್ರಿಯೆಗಳು ಮುಂದುವರೆದು ಫೆಬ್ರವರಿ 28ರಂದು ಅಂತಿಮ ಆದ್ಯತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಹೇಳಲಾಗಿದೆ.