ಬೆಂಗಳೂರು: ಹತ್ತು ಹದಿನೈದು ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಒಂದು ಬಾರಿಗೆ ಸೀಮಿತವಾಗಿ ಅವರ ಸ್ವಂತ ಜಿಲ್ಲೆಗೆ ವರ್ಗಾಯಿಸಿ ಕೊಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಶಿಕ್ಷಣ ಇಲಾಖೆ ಒಂದು ಬಾರಿ ವರ್ಗಾವಣೆಗೆ ಅವಕಾಶ ನೀಡುವ ಕುರಿತು ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಇದೇ ವೇಳೆ ಒಂದು ಬಾರಿಗೆ ಅನ್ವಯವಾಗುವಂತೆ ಶಿಕ್ಷಕರನ್ನು ವರ್ಗಾವಣೆ ಮಾಡಬೇಕೆಂಬ ಬೇಡಿಕೆ ಇದ್ದು, ಇದನ್ನು ಪರಿಗಣಿಸಿರುವ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ಇದ್ದು, ಒಂದು ಬಾರಿಗೆ ಅನ್ವಯವಾಗುವಂತೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಕಾನೂನಿಗೆ ತಿದ್ದುಪಡಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕಲೆಹಾಕತೊಡಗಿದ್ದಾರೆ.
ತಮ್ಮ ಜಿಲ್ಲೆಗಳಿಗೆ ಹೋಗಲು ಪ್ರಾಥಮಿಕ ಶಾಲೆಗಳ 2702 ಶಿಕ್ಷಕಿಯರು, 3484 ಶಿಕ್ಷಕರು ಬಯಸಿದ್ದಾರೆ. ಅದೇ ರೀತಿ ಪ್ರೌಢಶಾಲೆಗಳ 1940 ಶಿಕ್ಷಕರು, 964 ಶಿಕ್ಷಕರು ತವರು ಜಿಲ್ಲೆಗೆ ಹೋಗಲು ಬಯಸಿದ್ದಾರೆ. ಇನ್ನೂ ಅನೇಕರು ತವರು ಜಿಲ್ಲೆಗೆ ಹೋಗುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.