ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಈ ಬಾರಿ ಸಂತಸವಾಗಿಲ್ಲ. 62,314 ಶಿಕ್ಷಕರು ಪ್ರಸಕ್ತ ವರ್ಷದಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, ಇವರಲ್ಲಿ 15,711 ಶಿಕ್ಷಕರಿಗೆ ಮಾತ್ರ ವರ್ಗಾವಣೆ ಭಾಗ್ಯ ಸಿಕ್ಕಿದೆ.
2023ರಲ್ಲಿ 73,785 ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, 30,629 ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವರ್ಗಾವಣೆಗೊಂಡ ಶಿಕ್ಷಕರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಅಲ್ಲದೇ, ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ ಶಿಕ್ಷಕರ ಸಂಖ್ಯೆಯೂ ಈ ಬಾರಿ ಸುಮಾರು 11 ಸಾವಿರದಷ್ಟು ಕಡಿಮೆಯಾಗಿದೆ.
ವರ್ಗಾವಣೆಗೊಂಡ ಶಿಕ್ಷಕರಲ್ಲಿ 10,595 ಪ್ರಾಥಮಿಕ ಶಿಕ್ಷಕರು, 5116 ಪ್ರೌಢಶಾಲಾ ಶಿಕ್ಷಕರಿದ್ದಾರೆ. ಇದರಲ್ಲಿ ಕೋರಿಕೆಯ ವರ್ಗಾವಣೆ ಹೆಚ್ಚಾಗಿದೆ. 8140 ಶಿಕ್ಷಕರು ಕೋರಿಕೆ ವರ್ಗಾವಣೆ ಪಡೆದುಕೊಂಡಿದ್ದು, 1400 ಶಿಕ್ಷಕರು ಪರಸ್ಪರ ವರ್ಗಾವಣೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಈ ವರ್ಷ ಕಡ್ಡಾಯ ವರ್ಗಾವಣೆಯನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದ್ದರಿಂದ ವರ್ಗಾವಣೆಗೊಂಡ ಶಿಕ್ಷಕರ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಒಂದು ವರ್ಷ ಸಾಮಾನ್ಯ ವರ್ಗಾವಣೆ, ಮತ್ತೊಂದು ವರ್ಷ ಕಡ್ಡಾಯ ವರ್ಗಾವಣೆಯನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ. ಕಡ್ಡಾಯ ವರ್ಗಾವಣೆಗೆ ಶಿಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು.