ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ದೂರವಾಣಿ ಕರೆ ಮಾಡಿ ವಾಗ್ವಾದ ನಡೆಸಿದ ಆರೋಪದ ಮೇಲೆ ಔರಾದ ತಾಲೂಕಿನ ಜೀರ್ಗಾ ಕೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಕುಶಾಲ ಪಾಟೀಲ ಅವರನ್ನು ಅಮಾನತು ಮಾಡಲಾಗಿದೆ.
ಕೇಂದ್ರ ಸಚಿವರ ಜೊತೆ ಅನುಚಿತವಾಗಿ ವರ್ತಿಸಿ ಅವರೊಂದಿಗಿನ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಹೆಡಗಾಪುರ ಗ್ರಾಮದ ಕುಶಾಲ ಪಾಟೀಲ ಕೇಂದ್ರ ಸಚಿವರಿಗೆ ಕರೆ ಮಾಡಿ ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ. ರೈತರಿಗೆ ತೊಂದರೆಯಾಗಿದೆ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದು, ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಸಚಿವ ಖೂಬಾ, ನಾನು ಮನೆಮನೆಗೆ ಗೊಬ್ಬರ ಪೂರೈಸಲು ಆಗುವುದಿಲ್ಲ. ಅಧಿಕಾರಿಗಳು ಇರುತ್ತಾರೆ ಎಂದು ಹೇಳಿದ್ದರು.
ಈ ಹೇಳಿಕೆ ವೈರಲ್ ಆಗಿ ಗೊಬ್ಬರ ಕೇಳಿದ ರೈತನೊಂದಿಗೆ ಸಚಿವ ಖೂಬಾ ಅನುಚಿತ ವರ್ತನೆ ಎಂದು ಅವರ ವಿರುದ್ಧ ರೈತ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಈ ಬೆಳವಣಿಗೆಗಳ ನಂತರ ಶಿಕ್ಷಕ ಕುಶಾಲ ಪಾಟೀಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಲಾಗಿದೆ.