ದಾವಣಗೆರೆ: ಮುಖ್ಯ ಶಿಕ್ಷಕಿ ವಿರುದ್ಧ ಷಡ್ಯಂತ್ರ ರೂಪಿಸಿ ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ತೊಳೆಸಿದ ಸಹ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಪರಿಶೀಲನೆ ನಂತರ ಮುಖ್ಯ ಶಿಕ್ಷಕಿಯನ್ನು ಸಿಲುಕಿಸಲು ಸಹ ಶಿಕ್ಷಕಿ ಷಡ್ಯಂತ್ರ ರೂಪಿಸಿರುವುದು ಬಯಲಾಗಿದ್ದು, ಬಳಿಕ ಮುಖ್ಯ ಶಿಕ್ಷಕಿ ಅಮಾನತು ಹಿಂಪಡೆದ ಸರ್ಕಾರ ಸಹ ಶಿಕ್ಷಕಿಯನ್ನು ಸಸ್ಪೆಂಡ್ ಮಾಡಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರು ಸಹ ಶಿಕ್ಷಕಿ ಸಿ.ಕೆ. ಸಾವಿತ್ರಮ್ಮ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮುಖ್ಯ ಶಿಕ್ಷಕಿ ಶೋಭಾ ಅವರ ಮೇಲಿನ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.