ಉಡುಪಿ: ಶಾಲೆಗೆ ಗೈರು ಹಾಜರಾಗಿ ವೇತನ ಪಡೆಯುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆನಗಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಅಂಪಾರು ದಿನಕರ ಶೆಟ್ಟಿ ಅಮಾನತುಗೊಂಡ ಶಿಕ್ಷಕ.
ಆನಗಳ್ಳಿ ಸರ್ಕಾರಿ ಶಾಲೆ ಸಹ ಶಿಕ್ಷಕ ದಿನಕರಶೆಟ್ಟಿ 2017 ರಿಂದ ಶಾಲೆಗೆ ಬರದೆ ವೇತನ ಪಡೆಯುತ್ತಿದ್ದರು. ಅನಾರೋಗ್ಯದ ನೆಪ ಹೇಳಿ ಬೇರೆ ವ್ಯವಹಾರ ಮಾಡಿಕೊಂಡಿದ್ದ ಸಹ ಶಿಕ್ಷಕನ ಅನುಪಸ್ಥಿತಿಯಲ್ಲಿ ಇನ್ನುಳಿದ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಗಿರುವ ದಿನಕರ ಶೆಟ್ಟಿ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿರಲಿಲ್ಲ.
ಆಗಾಗ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಶಿಕ್ಷಕ ಹಿಂತಿರುಗುತ್ತಿದ್ದ. ಶಿಕ್ಷಕ ಗೈರುಹಾಜರಾಗಿ ವೇತನ ಪಡೆಯುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕುಂದಾಪುರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದ ವೇಳೆ ದಿನಕರಶೆಟ್ಟಿ ಗೈರು ಹಾಜರಾಗಿದ್ದರು. ಪರಿಶೀಲನೆ ಬಳಿಕ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.