ಶಿವಮೊಗ್ಗ: ಕರ್ತವ್ಯ ಲೋಪ ಹಾಗೂ ಅಸಭ್ಯ ವರ್ತನೆ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿ.ಆರ್.ಪಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಬಿ.ಆರ್. ಶಾಂತರಾಜಪ್ಪ ಹಾಗೂ ದೊಡ್ಡಗೊಪ್ಪೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸವಿತಾ ಮೆಂಡೋನ್ಸ್ ಅಮಾನತುಗೊಂಡವರು.
ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಶಾಂತರಾಜಪ್ಪ ಶಾಲೆಗೆ ಹಲವು ಬಾರಿ ಗೈರು ಹಾಜರಾಗಿದ್ದರು. ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನದಲ್ಲಿ ಲೋಪ ಎಸಗಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 2021 -22ನೇ ಸಾಲಿನ ಮಕ್ಕಳ ಬಿಬಿಟಿ ಹಣವನ್ನು ಕೂಡ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸವಿತಾ ಮೆಂಡೋನ್ಸ್ ಅವರು ಶಾಲಾ ಮಕ್ಕಳಿಗೆ ಕಿರುಕುಳ, ಪೋಷಕರೊಂದಿಗೆ ಆಸಭ್ಯ ವರ್ತನೆ, ಶಿಕ್ಷಕರೊಂದಿಗೆ ವಿನಾಕಾರಣ ಜಗಳ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಪೋಷಕರು, ಶಿಕ್ಷಕರ ಸಭೆ ನಡೆಸಿ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದ್ದರೂ ಅವರು ಕೇಳಿರಲಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯನ್ನು ಮೀರಿ ಅದೇ ರೀತಿ ಅಸಭ್ಯ ವರ್ತನೆ ಮುಂದುವರೆಸಿದ್ದರು.
ಈ ಹಿನ್ನೆಲೆಯಲ್ಲಿ ಇಬ್ಬರೂ ಮುಖ್ಯ ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆ.ರ್ ಪರಮೇಶ್ವರಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.