ಬೆಂಗಳೂರು: ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಅಜೀವ ಸದಸ್ಯತ್ವ ನೀಡುವ ಜೊತೆಗೆ ನಿಧಿಯ ಸೌಲಭ್ಯಗಳನ್ನು ಕಲ್ಪಿಸಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕ್ರಮಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಈ ಕುರಿತಾಗಿ ಆದೇಶ ಹೊರಡಿಸಿದೆ. ಶಿಕ್ಷಕರಿಗೆ ಅಪಘಾತ ಮತ್ತು ಮರಣ ಪರಿಹಾರ ಸೌಲಭ್ಯ, ನಿವೃತ್ತ ಶಿಕ್ಷಕರು ಸೇರಿ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವು, ಶಿಕ್ಷಕರು ಮತ್ತು ಅವರ ಅವಲಂಬಿತರಿಗೆ ವೈದ್ಯಕೀಯ ನೆರವು, ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿವೇತನ, ಶಿಕ್ಷಕರಿಗೆ ಲ್ಯಾಪ್ಟಾಪ್, ಟ್ಯಾಬ್ ಖರೀದಿಗೆ ಆರ್ಥಿಕ ನೆರವು, ಶಿಕ್ಷಕರಿಗೆ ಬಡ್ಡಿರಹಿತ ಸಹಾಯಧನ, ಇಂಜಿನಿಯರಿಂಗ್, ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಬ್ಯಾಂಕ್ ಶೈಕ್ಷಣಿಕ ಸಾಲದ ಮರುಪಾವತಿ ಸೌಲಭ್ಯ ಪಡೆಯಬಹುದು.
ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಾಲೆ ಶಿಕ್ಷಕರಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಶಾಲೆ ಕಾಲೇಜುಗಳ ಶಿಕ್ಷಕರಿಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಅಜೀವ ಸದಸ್ಯತ್ವ ನೀಡಿ ಸೌಲಭ್ಯ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರು 3000 ರೂಪಾಯಿ ಪಾವತಿಸಿ ಅಜೀವ ಸದಸ್ಯತ್ವ ಕಾರ್ಡ್ ಪಡೆಯಬೇಕಿದೆ ಎಂದು ಹೇಳಲಾಗಿದೆ.