
ಶಿಕ್ಷಕ ಎಂದರೆ ವಿದ್ಯಾರ್ಥಿಗಳ ಬದುಕು ರೂಪಿಪಿಸುವ ಮಾರ್ಗದರ್ಶಕ. ಶಾಲೆಯಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸಿ ಮಕ್ಕಳಿಗೆ ವಿದ್ಯೆ, ಬುದ್ಧಿ ಹೇಳಿಕೊಡುವ, ಆತ್ಮವಿಶ್ವಾಸ, ಧೈರ್ಯ ತುಂಬಿ ಸಾಧನೆಯ ಹಾದಿಗೆ ಬೆಳಕು ಚಲ್ಲುವ ಶಿಕ್ಷಕ ವಿದ್ಯಾರ್ಥಿ ಬದುಕಲ್ಲಿ ನಿಜಕ್ಕೂ ಗುರುವೇ ಸರಿ. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಉಸಿರುಕಟ್ಟುವ ವಾತಾವರಣ, ಶಿಕ್ಷಕರೆಂದರೆ ವಿದ್ಯಾರ್ಥಿಗಳಿಗೆ ಭಯ ಎನ್ನುವಂತಹ ಸಂದರ್ಭಗಳೇ ಹೆಚ್ಚು. ಇಂತಹ ಹೊತ್ತಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಶಿಕ್ಷಕಿ ಹಾಗೂ ಮಕ್ಕಳ ನಡುವಿನ ಬಾಂಧವ್ಯದ ವಿಡಿಯೋ ಎಲ್ಲರ ಗಮನ ಸೆಳೆಯುವಂತಿದೆ.
ವಿದ್ಯಾರ್ಥಿಗಳ ಮುಖ ನೋಡದೇ ಕೇವಲ ದ್ವನಿಯಿಂದಲೇ ವಿದ್ಯಾರ್ಥಿಗಳ ಹೆಸರನ್ನು ಹೇಳುವಷ್ಟು ತಾದಾತ್ಮ್ಯತೆ. ಕುರ್ಚಿಯಲ್ಲಿ ಕುಳಿತ ಶಿಕ್ಷಕಿ ಹಿಂದೆ ಸಾಲು ಸಾಲು ವಿದ್ಯಾರ್ಥಿಗಳು….ಒಬ್ಬರಾದ ಮೇಲೆ ಒಬ್ಬರಂತೆ ಬಂದು ಟೀಚರ್…. ಎಂದು ಕರೆಯುತ್ತಿದಂತೆ ಶಿಕ್ಷಕಿ ಇದು ಯಾವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಧ್ವನಿ ಎಂಬುದನ್ನು ಗುರುತಿಸಿ ಹೆಸರು ಹೇಳುತ್ತಾರೆ. ಒಂದು ರೀತಿಯಲ್ಲಿ ಮಕ್ಕಳಿಗೆ ಪಾಠದ ಜೊತೆ ಆಟದ ಚಟುವಟಿಕೆಯಂತೆ. ಟೀಚರ್ ಎಂದರೆ ಭಯವಿಲ್ಲದೇ ಉತ್ತಮ ವಾತಾವರಣದಲ್ಲಿ ಮಕ್ಕಳು ಪಾಠವನ್ನು ಕಲಿಯುವ ವೇದಿಕೆ. ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಎಲ್ಲರ ಮನಮುಟ್ಟುವಂತಿದೆ. ನಿಜಕ್ಕೂ ಶಿಕ್ಷಕಿಯೆಂದರೆ ಹೀಗಿದ್ದರೆ ಎಷ್ಟು ಚೆಂದ…..