ಬಳ್ಳಾರಿ: ಬಳ್ಳಾರಿಯ ಮಿಲ್ಲರ್ ಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಪ್ರಕಾಶ ಟಿ. ಹಾಗೂ ಶಿಕ್ಷಕ ಮಲ್ಲಿಕಾರ್ಜುನಪ್ಪ ಶಾಲೆಯಲ್ಲಿ ದಾಖಲಾದ 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರೂ ಪುಸ್ತಕದಲ್ಲಿ ಹಾಜರಾತಿ ಹಾಕಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.
ಶಾಲೆಯಲ್ಲಿ ದಾಖಲಾದ 8ನೇ ತರಗತಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರಗತಿಗೆ ಗೈರು ಹಾಜರಾಗಿದ್ದರು. ಮಕ್ಕಳ ತಂದೆ ಮಾಡಿರುವ 30 ಸಾವಿರ ರೂ. ಸಾಲ ಮರುಪಾವತಿಗಾಗಿ ದಾದಾವಲಿ ಎಂಬುವವರು ತನ್ನ ಮನೆಯ ಕೆಲಸಕ್ಕೆ ಹಾಗೂ ಬೇರೆಯವರ ಮನೆಯಲ್ಲಿ ದುಡಿಯಲು ಬಿಟ್ಟಿರುವುದರಿಂದ ಬಂದ ಹಣದಿಂದ ಸಾಲ ತೀರಿಸಿಕೊಳ್ಳವುದರ ಮೂಲಕ ದೌರ್ಜನ್ಯ ಎಸಗಿದ್ದಾರೆ.
ಸದರಿ ಮಿಲ್ಲರಪೇಟೆ ಶಾಲಾ ಶಿಕ್ಷಕರು ಮಕ್ಕಳು ಗೈರು ಹಾಜರಾಗಿದ್ದರೂ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಸದರಿ ಶಿಕ್ಷಕರು ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮಗಳು 2021ರ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಆ.1 ರಂದು ಅಮಾನುತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.