ಬೆಂಗಳೂರು: ಪದವೀಧರ ಶಿಕ್ಷಕರಿಗೆ ಸಿಹಿ ಸುದ್ದಿ ಇಲ್ಲಿದೆ. 4 ವರ್ಷಗಳ ನಂತರ ಪ್ರೌಢಶಾಲೆಗಳ ಖಾಲಿ ಪಿಸಿಎಂ ಹುದ್ದೆಗಳಿಗೆ ಮರು ಹೊಂದಾಣಿಕೆ ಆರಂಭವಾಗಲಿದೆ. ಶಿಕ್ಷಣ ಇಲಾಖೆಯಿಂದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲೆ ಸಹ ಶಿಕ್ಷಕರ ವೃಂದದ ತರಬೇತಿ ಹೊಂದಿದ ಪದವೀಧರ ಶಿಕ್ಷಕರ ಮರು ಹೊಂದಾಣಿಕೆಗೆ ಸೂಚನೆ ನೀಡಲಾಗಿದೆ.
4 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇದರಿಂದಾಗಿ ಎರಡು ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಅನುಕೂಲವಾಗುತ್ತದೆ. ಎಂಟನೇ ತರಗತಿಗೆ ಶೂನ್ಯ ದಾಖಲಾತಿ ಇರುವ ಸರ್ಕಾರಿ ಶಾಲೆಗಳ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಗಣಿತ ಮತ್ತು ವಿಜ್ಞಾನ ಹುದ್ದೆಗಳಿಗೆ ಮರು ಹೊಂದಾಣಿಕೆ ಮಾಡಿ ಸ್ಥಳ ನಿಯುಕ್ತಿಗೊಳಿಸುವಂತೆ ಪ್ರೌಢಶಿಕ್ಷಣ ಇಲಾಖೆ ವತಿಯಿಂದ ಡಿಡಿಪಿಐಗಳು ಮತ್ತು ಬಿಇಒಗಳಿಗೆ ಸೂಚನೆ ನೀಡಲಾಗಿದೆ.
ಆರರಿಂದ ಎಂಟನೇ ತರಗತಿ ಬೋಧನೆಗಾಗಿ ಹೊಸದಾಗಿ ನೇಮಕ ಮಾಡಿಕೊಂಡ 13,151 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹುದ್ದೆ ನಿಯೋಜಿಸಬೇಕಿರುವ ಹಿನ್ನೆಲೆಯಲ್ಲಿ ಪದವೀಧರ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೇಳಲಾಗಿದೆ.