ವಿಜಯಪುರ: ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದ ಬಿಎಕೆ ಪ್ರೌಢಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕ ಎನ್.ಜಿ. ಕೋಟ್ಯಾಳ ಅವರಿಗೆ ಅದ್ದೂರಿ ಬೇಳ್ಕೊಡುಗೆ ನೀಡಲಾಗಿದ್ದು, ಭರ್ಜರಿ ಉಡುಗೊರೆಗಳನ್ನು ನೀಡಲಾಗಿದೆ.
ಗ್ರಾಮದ ಸಾವಿರಾರು ಜನ, ಹಳೆಯ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಒಂದಾಗಿ ಕಾಣಿಕೆ ನೀಡಿದ್ದಾರೆ. ತೆರೆದ ವಾಹನದಲ್ಲಿ ಕಲಾತಂಡಗಳೊಂದಿಗೆ ನಿವೃತ್ತಿ ಹೊಂದಿದ ಶಿಕ್ಷಕ ಕೊಟ್ಯಾಳ ಅವರ ಮೆರವಣಿಗೆ ಮಾಡಿದ್ದಾರೆ.
ನಿವೃತ್ತಿ ಹೊಂದಿದ ಶಿಕ್ಷಕ ಎನ್.ಜಿ. ಕೊಟ್ಯಾಳ ಅವರಿಗೆ 50 ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ ಮೂರ್ತಿಗಳು, ಡಬಲ್ ಡೋರ್ ಫ್ರಿಡ್ಜ್, 32 ಇಂಚಿನ ಎಲ್ಇಡಿ ಟಿವಿ, ಕಂಚಿನ ಸರಸ್ವತಿ ಮೂರ್ತಿ, ಸಿದ್ದೇಶ್ವರ ಶ್ರೀಗಳ 25 ಭಾವಚಿತ್ರ, ಬುದ್ಧನ ಮೂರ್ತಿ, ಬೆಲೆ ಬಾಳುವ ಕಂಬಳಿ, ಅಂಬೇಡ್ಕರ್, ಬುದ್ಧ, ಬಸವಣ್ಣ, ಕನಕದಾಸರ ಮೊದಲಾದ ಮಹನೀಯರ ಭಾವಚಿತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗ್ರಾಮಸ್ಥರು ಅದ್ದೂರಿಯಾಗಿ ಬೇಳ್ಕೊಡುಗೆ ನೀಡಿದ್ದಾರೆ.
ಗ್ರಾಮಸ್ಥರು ಕಾಣಿಕೆಯಾಗಿ ನೀಡಿದ 96 ಸಾವಿರ ರೂ. ನಗದು ಹಾಗೂ ತಮ್ಮ ತಂದೆ-ತಾಯಿ ಸ್ಮರಣಾರ್ಥ ಐವತ್ತು ಸಾವಿರ ರೂಪಾಯಿಗಳನ್ನು ಶಿಕ್ಷಕ ಕೊಟ್ಯಾಳ ಅವರು ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ದೇಣಿಗೆ ನೀಡಿದ್ದಾರೆ. ಈ ಹಣದಲ್ಲಿ ಪ್ರತಿ ವರ್ಷ ಬರುವ ಬಡ್ಡಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತೆ ಹೇಳಿದ್ದಾರೆ. ಶಿಕ್ಷಕ ಕೋಟ್ಯಾಳ ಅವರ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿ ಮಲ್ಲಿನಾಥ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟು ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತೆ ತಿಳಿಸಿದ್ದಾರೆ.