
ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ -2020 ತಿದ್ದುಪಡಿ ಕಾಯ್ದೆ ಜಾರಿಯಾದ ನಂತರ ರಾಜ್ಯದ ಸರ್ಕಾರಿ ಶಾಲೆಗಳ 30,629 ಶಿಕ್ಷಕರ ವರ್ಗಾವಣೆ ಪ್ರಯೋಜನ ಪಡೆದುಕೊಂಡಿದ್ದಾರೆ.
ಶಿಕ್ಷಕರ ವರ್ಗಾವಣೆಯಿಂದ ತೆರವಾಗುವ ಸ್ಥಾನಗಳಿಗೆ ಮತ್ತೆ 15 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ಕುರಿತಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ಇದೇ ಶೈಕ್ಷಣಿಕ ವರ್ಷದ ಆರಂಭದಲ್ಲಿ 35,000 ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ವರ್ಗಾವಣೆಯಾದ ಸ್ಥಳಗಳಿಗೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಪ್ರಕ್ರಿಯೆ ಪೂರ್ಣಗೊಂಡ ನಂತರ ಉತ್ತರ ಕರ್ನಾಟಕ, ಮಲೆನಾಡು ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಲಿದೆ. ಹೀಗಾಗಿ ಮತ್ತೆ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ವರ್ಗಾವಣೆಯಾದ ಶಿಕ್ಷಕರು ಕೆಲವು ಜಿಲ್ಲೆಗಳಲ್ಲಿ ತಾವು ಆಯ್ಕೆ ಮಾಡಿಕೊಂಡ ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮತ್ತೆ ಕೆಲವೆಡೆ ಕಾಯಂ ಶಿಕ್ಷಕರು ಇಲ್ಲದ ಕಾರಣ ಬದಲಿ ವ್ಯವಸ್ಥೆ ಮಾಡುವವರೆಗೆ ಕರ್ತವ್ಯದಿಂದ ಬಿಡುಗಡೆ ಮಾಡಿದಂತೆ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಿದೆ.