ಬೆಂಗಳೂರು: ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ(ಪದವೀಧರ) ಹುದ್ದೆಗಳ ನೇಮಕಾತಿ ಪರೀಕ್ಷೆ ಪಲಿತಾಂಶವನ್ನು ಪ್ರಕಟಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮೇ 21, 22 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ವೈಯಕ್ತಿಕ ಅಂಕಗಳನ್ನು ಇಲಾಖೆಯ ವೆಬ್ಸೈಟ್ www.school education.jar.nic.in ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ(ಸಿಇಟಿ) ಅಂಕಗಳನ್ನು ಮತ್ತು ಮೀಸಲಾತಿ ವಿವರಗಳನ್ನು ಹೊರತುಪಡಿಸಿ, ಆನ್ಲೈನ್ ಅರ್ಜಿಯಲ್ಲಿನ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ ಮತ್ತು ತಾಯಿಯ ಹೆಸರು, ಜನ್ಮ ದಿನಾಂಕ, ಪದವಿ, ಬಿಎಡ್ ಮತ್ತು ಡಿ.ಎಲ್.ಇ.ಡಿ. ಮತ್ತು CTET/TET ಅಂಕಗಳಿಗೆ ಸಂಬಂಧಿಸಿದಂತೆ ಮಾತ್ರ ತಿದ್ದುಪಡಿಗೆ ಆಗಸ್ಟ್ 18 ರಿಂದ 24ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಮಾಹಿತಿಗಳಲ್ಲಿ ತಿದ್ದುಪಡಿ ಅಗತ್ಯವಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಮನವಿಯನ್ನು ಅಗತ್ಯ ದೃಢೀಕೃತ ಪ್ರಮಾಣ ಪತ್ರಗಳೊಂದಿಗೆ ವಿಶೇಷ ಅಧಿಕಾರಿ ಕೇಂದ್ರೀಕೃತ ದಾಖಲಾತಿ ಘಟಕ, ಕೆಜಿ ರಸ್ತೆ, ಬೆಂಗಳೂರು ಇವರಿಗೆ ಖುದ್ದಾಗಿ ಸಲ್ಲಿಸುವುದು. ಅಂಚೆ ಅಥವಾ ಇನ್ನಿತರ ಯಾವುದೇ ವಿಧಾನದಲ್ಲಿ ಸಲ್ಲಿಸುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ. ಆಗಸ್ಟ್ 24ರ ನಂತರ ಈ ಸಂಬಂಧ ಯಾವುದೇ ಮನವಿಗಳನ್ನು ಸ್ವೀಕರಿಸುವುದಿಲ್ಲವೆಂದು ಹೇಳಲಾಗಿದೆ.