ಬೆಂಗಳೂರು: 13,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ತಲುಪಿದೆ.
13 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದಂತೆ ಕೆಲವು ಅಭ್ಯರ್ಥಿಗಳು ತಮ್ಮ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸದಿರುವುದನ್ನು ಆಕ್ಷೇಪಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(KAT) ಮೊರೆ ಹೋಗಿದ್ದಾರೆ.
ಅಕ್ಟೋಬರ್ 12ರಂದು ಹೈಕೋರ್ಟ್ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ತಂದೆಯ ಆದಾಯ ಪ್ರಮಾಣ ಪತ್ರ ಕುರಿತಾಗಿ ಅಭ್ಯರ್ಥಿಗಳು ಕೆಎಟಿ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಆದೇಶ ನೀಡಿತ್ತು. ಬೆಂಗಳೂರಿನ ಬಿಳೇಕಹಳ್ಳಿಯ ಚೈತ್ರಾ ಸೇರಿದಂತೆ 22 ಅಭ್ಯರ್ಥಿಗಳು ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ್ ಮತ್ತು ಆಡಳಿತ ಸದಸ್ಯ ಎಸ್. ಶಿವಶೈಲಂ ಅವರಿದ್ದ ಪೀಠವು ಪ್ರತಿವಾದಿ ಸರ್ಕಾರ, ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 6ಕ್ಕೆ ನಿಗದಿಪಡಿಸಿದೆ.
ಅರ್ಜಿ ವಿಲೇವಾರಿಗಾಗಿ ಸರ್ಕಾರದ ಉತ್ತರ ಅವಶ್ಯಕವಾಗಿದ್ದು, ಯಾವುದೇ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದರೆ ಅದು ಈ ಅರ್ಜಿಯ ತೀರ್ಪಿಗೆ ಒಳಪಡುತ್ತದೆ ಎಂದು ಕೆಎಟಿ ತಿಳಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಸತೀಶ್ ಭಟ್ ಅವರು, ನಿಯಮದಂತೆ ತಂದೆಯ ಆದಾಯ ಪ್ರಮಾಣ ಪತ್ರವನ್ನು ಮಾತ್ರ ಪರಿಗಣಿಸಬೇಕೆ ಹೊರತೂ ಪತಿಯ ಆದಾಯ ಪ್ರಮಾಣ ಪತ್ರವನ್ನಲ್ಲ, ಸುಪ್ರೀಂ ಕೋರ್ಟ್ ಕೂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುರೇಂದ್ರ ಸಿಂಗ್ ವರ್ಸಸ್ ಪಂಜಾಬ್ ಎಲೆಕ್ಟ್ರಿಕ್ ಸಿಟಿ ಬೋರ್ಡ್ ಅಂಡ್ ಅದರ್ಸ್ ಪ್ರಕರಣದಲ್ಲಿ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸಬೇಕು ಎಂದು ಆದೇಶ ನೀಡಿದೆ. ಆದರೆ, ಇದಕ್ಕೆ ವಿರುದ್ಧವಾದ ನಿಲುವು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹುಟ್ಟಿನಿಂದ ಜಾತಿ ನಿರ್ಧಾರವಾಗುತ್ತದೆ. ಒಂದು ಜಾತಿಯ ಅಭ್ಯರ್ಥಿ ಬೇರೆ ಜಾತಿಯ ಅಭ್ಯರ್ಥಿಯನ್ನು ಮದುವೆಯಾಗುವುದರಿಂದ ಅವರ ಜಾತಿ ಬದಲಾವಣೆ ಆಗುವುದಿಲ್ಲ. ಆಗ ತಂದೆಯ ಆದಾಯವೇ ಪರಿಗಣಿಸಲ್ಪಡುತ್ತದೆ ಹೊರತೂ ಪತಿಯ ಆದಾಯವಲ್ಲ ಎಂದು ವಿವರಿಸಿದ್ದಾರೆ.
ಸ್ಟೇಟ್ ಆಫ್ ಕರ್ನಾಟಕ ವರ್ಸಸ್ ಯೋಗೇಶ್ವರಿ ಅಂಡ್ ಅದರ್ಸ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಪೋಷಕರ ಆದಾಯ ಪ್ರಮಾಣ ಪತ್ರವನ್ನೇ ಪರಿಗಣಿಸಬೇಕು ಎಂದು ಆದೇಶ ನೀಡಿದೆ. ಅಂತೆಯೇ ಈ ಪ್ರಕರಣದಲ್ಲಿಯೂ ಅರ್ಜಿದಾರರು ಸಲ್ಲಿಸಿದ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸಿ ಅವರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅಕ್ಟೋಬರ್ 19ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಕೌನ್ಸಿಲಿಂಗ್ ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಅರ್ಜಿದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ನಿರ್ದೇಶನ ಕೋರಿ ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದಾರೆ.