ಬೆಂಗಳೂರು: ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆಯಿದ್ದು, 13,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇದರ ಹೊರತಾಗಿ ಇನ್ನೂ 20,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸರ್ಕಾರಿ ಶಾಲೆಗಳ ಮೂಲ ಸೌಲಭ್ಯ ಕುರಿತಾಗಿ ಹೈಕೋರ್ಟ್ ತೀವ್ರ ಆಕ್ಷೇಪಣೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ, ಶಾಲೆಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
20000 ಶಿಕ್ಷಕರ ನೇಮಕಾತಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡುವ ವಿಶ್ವಾಸವಿದೆ. ಶಿಕ್ಷಕರನ್ನು ನೇಮಕಾತಿ ಮಾಡಿ ಕೊರತೆ ನೀಗಿಸಲಾಗುವುದು. ಕರ್ನಾಟಕ ಪಬ್ಲಿಕ್ ಶಾಲೆ ಸಂಖ್ಯೆ ಹೆಚ್ಚಳ ಮಾಡಲಾಗುವುದು. ಮುಂದಿನ ಆರ್ಥಿಕ ವರ್ಷದಲ್ಲಿ 500 ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದರು.
13 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ವ್ಯಾಜ್ಯದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುವುದು. ಹೊಸದಾಗಿ 20 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಿಎಸ್ಆರ್ ನಿಧಿ ಬಳಸಿಕೊಂಡು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.