ಬೆಂಗಳೂರು: ಈ ವರ್ಷ 4985 ಶಿಕ್ಷಕರು ನಿವೃತ್ತರಾಗುತ್ತಿದ್ದು, ಈ ಹುದ್ದೆಗಳ ಬರ್ತಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ 15,000 ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, 13,352 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನ್ಯಾಯಾಲಯ ಪ್ರಕರಣ ಹೊರತುಪಡಿಸಿ 12,415 ಶಿಕ್ಷಕರಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ.
ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ 5,000 ಶಿಕ್ಷಕರ ಕೊರತೆ ಎದುರಾಗುವುದರಿಂದ 2023ರ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳ ಬರ್ತಿಗೆ ಶಿಕ್ಷಣ ಇಲಾಖೆ ವತಿಯಿಂದ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದಲ್ಲಿ 41,493 ಪ್ರಾಥಮಿಕ ಶಾಲೆಗಳಿದ್ದು, ಮಂಜೂರಾದ 1,88,531 ಹುದ್ದೆಗಳಿವೆ. 1,48,501 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 40 ಸಾವಿರ ಹುದ್ದೆಗಳು ಖಾಲಿ ಇವೆ. 4844 ಪ್ರೌಢಶಾಲೆಗಳಿದ್ದು ಮಂಜೂರಾದ 44,341 ಹುದ್ದೆಗಳಿವೆ. 34,186 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 10,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಒಟ್ಟಾರೆ 50 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿಯಿದ್ದು, ಸದ್ಯ 7500 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಲಾಗಿದೆ.