ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡಿರುವ ವಿಚಾರವಾಗಿ ಹೈಕೋರ್ಟ್ ವಿಭಾಗೀಯ ಪೀಠ ಭಾನುವಾರ ವಿಶೇಷ ಕಲಪ ನಡೆಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿ ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪರಿಗಣಿಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗಿಯ ಪೀಠ ವಿಚಾರಣೆ ನಡೆಸಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರ್ಲೆ, ನ್ಯಾಯಮೂರ್ತಿ ಎ.ಜಿ.ಎಸ್. ಕಮಲ್ ಅವರಿದ್ದ ಪೀಠ ಸುಧೀರ್ಘ ವಾದ ಆಲಿಸಿ ವಿಚಾರಣೆಯನ್ನು ಸೆಪ್ಟಂಬರ್ 8ಕ್ಕೆ ಮುಂದೂಡಿದೆ.
15 ಸಾವಿರ ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ಹಿಂದುಳಿದ ವರ್ಗ ಪರಿಗಣಿಸುವಾಗ ಆದಾಯ ಪ್ರಮಾಣ ಪತ್ರಕ್ಕೆ ಪತಿಯ ಆದಾಯವನ್ನು ಮಾನದಂಡವಾಗಿಟ್ಟುಕೊಳ್ಳಲಾಗಿತ್ತು. ಸರ್ಕಾರದ ಈ ನೀತಿಯನ್ನು ಏಕ ಸದಸ್ಯ ಪೀಠ ಅಮಾನ್ಯಗೊಳಿಸಿ ಅಭ್ಯರ್ಥಿ ಸಲ್ಲಿಸುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ತಂದೆಯ ಜಾತಿ ಮತ್ತು ಆದಾಯ ಪರಿಗಣಿಸಬೇಕೆಂದು ಸೂಚಿಸಿತ್ತು. ಈ ಪ್ರಕಾರವಾಗಿ ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿತ್ತು.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ಧ ಮೇಲ್ಮನವಿ ವಿಚಾರಣೆಯಲ್ಲಿ ಸೇವಾ ವಿವಾದಗಳಿಗೆ ಸಂಬಂಧಿಸಿದ ಪೀಠದಲ್ಲಿ ವಿಚಾರಣೆ ಆಗದಿರುವುದರಿಂದ ಆದೇಶ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗಿಯ ಪೀಠ ಸುದೀರ್ಘ ವಾದ ಆಲಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.