ಬೆಂಗಳೂರು: ಪದವೀಧರ ಶಿಕ್ಷಕರ ಬಡ್ತಿ ಪ್ರಮಾಣವನ್ನು ಶೇಕಡ 40ಕ್ಕೆ ಏರಿಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಗೆ ಬೋಧಿಸುವ ಪದವೀಧರ ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲಾಗುವುದು.
ಆರರಿಂದ ಎಂಟನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಶೇಕಡ 33 ರಷ್ಟು ಹುದ್ದೆಗಳ ಪ್ರಮಾಣವನ್ನು ಶೇಕಡ 40 ರಷ್ಟಕ್ಕೆ ಹೆಚ್ಚಳ ಮಾಡಲು ಸರ್ಕಾರ ಅನುಮೋದಿಸಿದೆ.
ಸರ್ಕಾರಿ ಶಾಲೆಗಳಲ್ಲಿ 1.08 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿದ್ದು, 52,630 ಹುದ್ದೆಗಳು ಪದವೀಧರ ಶಿಕ್ಷಕರಿಗೆ ಮೀಸಲಾಗಿರುತ್ತದೆ. ಶೇಕಡ 67 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಶೇಕಡ 33ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ಮಾಡಿಕೊಳ್ಳಲಾಗುತ್ತದೆ. ಈಗ ಶೇಕಡ 40ರಷ್ಟು ಹುದ್ದೆಗಳಿಗೆ ಬಡ್ತಿ ನೀಡಲಾಗುವುದು. 20 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಪ್ರಯೋಜನ ಸಿಗಲಿದೆ ಎನ್ನಲಾಗಿದೆ.