ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹೊಸ ನೇಮಕಾತಿ ಹಿನ್ನೆಲೆಯಲ್ಲಿ ಈ ವರ್ಷ ಶಿಕ್ಷಕರ ವರ್ಗಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ವರ್ಗಾವಣೆ ನಿರೀಕ್ಷೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 25,000ಕ್ಕೂ ಅಧಿಕ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನಿರಾಸೆ ಮೂಡಿಸಿದೆ ಎಂದು ಹೇಳಲಾಗಿದೆ.
2023 -24ನೇ ಸಾಲಿನಲ್ಲಿ ನಡೆಸಬೇಕಿದ್ದ ಕಡ್ಡಾಯ ವರ್ಗಾವಣೆಯನ್ನು ನಡೆಸದಿರಲು ಸರ್ಕಾರ ನಿರ್ಧರಿಸಿದೆ. ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ನಗರಗಳತ್ತ ವರ್ಗಾವಣೆ ಮಾಡಿಕೊಳ್ಳಲು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ.
ಸರ್ಕಾರ ಪ್ರತಿ ವರ್ಷ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಎರಡು ವರ್ಷಕ್ಕೆ ಒಮ್ಮೆ ವರ್ಗಾವಣೆ ನಡೆಸಲಾಗುತ್ತಿದೆ. 2022 -23ನೇ ಸಾಲಿನ ವರ್ಗಾವಣೆ ನಾಲ್ಕು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿದೆ. ಆರರಿಂದ ಎಂಟನೇ ತರಗತಿಗಾಗಿ 13,351 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವರ್ಗಾವಣೆ ನಡೆಸದಿರಲು ತೀರ್ಮಾನಿಸಲಾಗಿದೆ.
ಪೂರ್ಣ ಪ್ರಮಾಣದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಪರೀಕ್ಷಾ ಸಮಯ ಬರುತ್ತದೆ. ಜನವರಿಯಿಂದ ಶಿಕ್ಷಕರಿಗೆ ಪರೀಕ್ಷೆ ಕೆಲಸ ಆರಂಭವಾಗುತ್ತದೆ. ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆ ಕೈತಪ್ಪದಿರಲು ಕೂಡಲೇ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಹೀಗಾಗಿ ವರ್ಗಾವಣೆ ಪ್ರಕ್ರಿಯೆ ನಡೆಸುವುದಿಲ್ಲ ಎನ್ನಲಾಗಿದೆ. ಒಂದು ವರ್ಷ ಕಡ್ಡಾಯ ವರ್ಗಾವಣೆ, ಮತ್ತೊಂದು ವರ್ಷ ಹೆಚ್ಚುವರಿ ವರ್ಗಾವಣೆ ನಡೆಸಲಿದ್ದು, ಈ ವರ್ಷ ಕಡ್ಡಾಯ ವರ್ಗಾವಣೆ ನಡೆಸದಿರಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.