ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿ ಪಾಠ ಮಾಡಲು 15,000 ಪದವೀಧರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಪದವಿಯಲ್ಲಿ ಶೇಕಡ 50 ರಷ್ಟು ಅಂಕ ಮತ್ತು ಬಿಎಡ್ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಪದವೀಧರ ಶಿಕ್ಷಕರ ಹುದ್ದೆಗೆ ಪರಿಗಣಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಭಾಷೆ ವಿಷಯಗಳಲ್ಲಿ ಹುದ್ದೆ ಬಯಸುವ ಅಭ್ಯರ್ಥಿಗಳು ಪದವಿಯಲ್ಲಿ ಭಾಷಾ ವಿಷಯಗಳ ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಸಂಸ್ಕೃತ ಸೇರಿದಂತೆ ಇತರೆ ಭಾಷೆಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡಿರಬೇಕು. ಐಚ್ಛಿಕ ವಿಷಯಗಳಲ್ಲಿ ಕನಿಷ್ಠ ಶೇಕಡ 50 ರಷ್ಟು ಅಂಕ ಪಡೆದಿರಬೇಕು.
ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಇಂಜಿನಿಯರಿಂಗ್ ಪದವೀಧರರಿಗೂ ಅವಕಾಶ ನೀಡಲಾಗಿದೆ. ಆರ್ಕಿಟೆಕ್ಚರ್ ವಿಷಯ ಹೊರತುಪಡಿಸಿ ಕನಿಷ್ಠ ಮೂರು ಅಥವಾ ನಾಲ್ಕು ಸೆಮಿಸ್ಟರ್ ಗಳನ್ನು ಗಣಿತ ಅಥವಾ ಅನ್ವಯಿಕ ಗಣಿತ ವಿಷಯ ಅಭ್ಯಾಸ ಮಾಡಿರುವ ಇಂಜಿನಿಯರಿಂಗ್ ಪದವೀಧರರನ್ನು ಗಣಿತ ಶಿಕ್ಷಕರ ಹುದ್ದೆಗೆ ಪರಿಗಣಿಸಲಾಗಿದೆ.
ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಜೊತೆಗೆ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್, ಜಿಯೋಗ್ರಫಿ, ಜಿಯಾಲಜಿ, ರಸಾಯನಶಾಸ್ತ್ರ, ಬಯೋಟೆಕ್ನಾಲಜಿ ವಿಷಯಗಳನ್ನು ಐಚ್ಛಿಕವಾಗಿ ಅಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳು, ಪದವಿಯಲ್ಲಿ ಪಡೆದ ಅಂಕಗಳು ಮತ್ತು ಬಿಎಡ್ ನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಶೇಕಡ 50ರಷ್ಟು ಸ್ಪರ್ಧಾತ್ಮಕ ಪರೀಕ್ಷೆ ಅಂಕ, ಶೇಕಡ 20ರಷ್ಟು ಟಿಇಟಿ ಪರೀಕ್ಷೆ ಅಂಕ, ಶೇಕಡ 20ರಷ್ಟು ಪದವಿ ಪರೀಕ್ಷೆ ಅಂಕ ಮತ್ತು ಶೇಕಡ 10 ರಷ್ಟು ಬಿಎಡ್ ಶಿಕ್ಷಣದ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.