ಬೆಂಗಳೂರು: ಪದವೀಧರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ(ಆರರಿಂದ ಎಂಟನೇ ತರಗತಿ) ಆಯ್ಕೆಯಾಗಿ ಆದೇಶ ಪತ್ರಕ್ಕಾಗಿ ಒಂದೂವರೆ ವರ್ಷದಿಂದ ಕಾಯುತ್ತಿದ್ದ ಅಭ್ಯರ್ಥಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ನೇಮಕಾತಿ ಆದೇಶ ಪ್ರತಿ ನೀಡುವಂತೆ ಶಿಕ್ಷಣ ಇಲಾಖೆ ವತಿಯಿಂದ ಎಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 4ರಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಮಾಣ ಪತ್ರ ವಿತರಣೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಬಗ್ಗೆ ಸೂಚನೆ ನೀಡಿದ್ದಾರೆ.
2022- 23ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ಸ್ಥಳ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು.
ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತೇವೆ ಎಂಬ ಲಿಖಿತ ಸ್ವೀಕೃತಿ ಪಡೆದು 11,494 ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಲಾಗಿತ್ತು. ಉಳಿದ ಅಭ್ಯರ್ಥಿಗಳು ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವ ವೇಳೆಗೆ ಆದೇಶ ಪ್ರತಿ ನೀಡದಂತೆ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಇದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು.
ಈಗ ಸುಪ್ರೀಂಕೋರ್ಟ್ ನಲ್ಲಿ ಮಧ್ಯಂತರ ಆದೇಶದ ಅನುಸಾರ ಈ ಹಿಂದೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ, ವಿವಿಧ ಕಾರಣಗಳಿಂದಾಗಿ ನೈಜತೆ ಪ್ರಮಾಣ ಪತ್ರ, ಪೊಲೀಸ್ ದೃಡೀಕರಣ, ಅಂಕಪಟ್ಟಿ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣ ಪತ್ರ ಸ್ವೀಕೃತವಾಗದ ಮತ್ತು ನೇಮಕಾತಿ ಆದೇಶಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು, ಅಂತಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಅನುಮತಿ ನೀಡಲಾಗಿದೆ.
ಈ ಹಿಂದೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಸಿಂಧುತ್ವ ಪ್ರಮಾಣ ಪತ್ರವನ್ನು ನೇಮಕಾತಿ ಪ್ರಾಧಿಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸಲ್ಲಿಸಿ ಸ್ಥಳ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಮಾತ್ರ ಶಾಲಾ ಕರ್ತವ್ಯಕ್ಕೆ ಹಾಜರಾಗಲು ಷರತ್ತುಬದ್ಧವಾಗಿ ನೇಮಕಾತಿ ಆದೇಶ ಪತ್ರಗಳನ್ನು ನೀಡುವಂತೆ ತಿಳಿಸಲಾಗಿದೆ.