ಬೆಂಗಳೂರು: 15,000 ಪದವೀಧರ ಶಿಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6 ರಿಂದ 8 ನೇ ತರಗತಿವರೆಗೆ ಬೋಧನೆ ಮಾಡಲು 15,000 ಪದವೀಧರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಹುದ್ದೆಗಳು ಹಾಗೂ ಇತರೆ ಜಿಲ್ಲೆಗಳಿಗೆ 10 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸಲು ಏಪ್ರಿಲ್ 22 ರವರೆಗೆ ಅವಕಾಶ ನೀಡಲಾಗಿದ್ದು, www.school education.kar.nic.in ವೆಬ್ಸೈಟ್ ಮೂಲಕ ಕಡ್ಡಾಯವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ.
ಮೇ 21 ಮತ್ತು 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಮೇ 21 ರಂದು ಬೆಳಗ್ಗೆ 10.30 ರಿಂದ 1 ಗಂಟೆಯವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಪತ್ರಿಕೆ 2 ರ ಪರೀಕ್ಷೆ ನಡೆಯಲಿದೆ.
ಮೇ 22 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗಣಿತ, ವಿಜ್ಞಾನ, ಜೀವವಿಜ್ಞಾನ, ಸಮಾಜ ಪಾಠಗಳ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಪತ್ರಿಕೆ 3ರ ಪರೀಕ್ಷೆ ನಡೆಯಲಿದ್ದು, ಒಟ್ಟು 400 ಅಂಕಗಳಿಗೆ ಸಿಇಟಿ ಪರೀಕ್ಷೆ ನಡೆಸಲಾಗುವುದು.
ಆಂಗ್ಲಭಾಷೆ 1500, ಗಣಿತ ಮತ್ತು ವಿಜ್ಞಾನ 6500, ಜೀವವಿಜ್ಞಾನ 2000, ಸಮಾಜಶಾಸ್ತ್ರ 5 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.