ಬೆಂಗಳೂರು: ನೇಮಕಾತಿ ಆದೇಶವಾಗಿ ಒಂದು ವರ್ಷ ಪೂರ್ಣಗೊಂಡರೂ 15,000 ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಪದವೀಧರ ಪ್ರಾಥಮಿಕ ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವುದು ಅನುಮಾನವೆನ್ನಲಾಗಿದೆ.
ಅಂತಿಮ ಪಟ್ಟಿಯನ್ನು ಪ್ರಶ್ನಿಸಿ ಕಲ್ಯಾಣ ಕರ್ನಾಟಕದ ಕೆಲವು ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದು, ಸದ್ಯಕ್ಕಂತೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಪತಿ, ತಂದೆಯ ಆದಾಯ, ಜಾತಿ ಪ್ರಮಾಣ ಪತ್ರ ವಿಚಾರದ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ಕಲ್ಯಾಣ ಕರ್ನಾಟಕದ ಕೆಲವು ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿರುವುದರಿಂದ ಅಂತಿಮ ಪಟ್ಟಿ ಬಿಡುಗಡೆಯಾದರೂ ಆಯ್ಕೆಯಾದ ಶಿಕ್ಷಕರಿಗೆ ನೆಮ್ಮದಿ ಇಲ್ಲದಂತಾಗಿದೆ.
15 ಸಾವಿರ ಶಿಕ್ಷಕರ ಹುದ್ದೆ ನೇಮಕಾತಿಯಲ್ಲಿ 13,352 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಂತಿಮ ಆಯ್ಕೆ ಪಟ್ಟಿಯಿಂದ 150ಕ್ಕೂ ಹೆಚ್ಚು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೊರಗೂಳಿದ ಪರಿಣಾಮ ಇವರು ನ್ಯಾಯ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಉಳಿದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ.
15,000 ಶಿಕ್ಷಕರ ಹುದ್ದೆಯಲ್ಲಿ 5000 ಹುದ್ದೆಗಳು ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದಕ್ಕೆ ಮೀಸಲಾಗಿದೆ. ಇದರಲ್ಲಿ 4193 ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಗೆಯಲ್ಲಿ ಆಯ್ಕೆಯಾಗಿದ್ದಾರೆ. ಶೇಕಡ 80ರಷ್ಟು ಸ್ಥಳೀಯ ವೃಂದ, 20ರಷ್ಟು ಮಿಕ್ಕುಳಿದ ವೃಂದ ಎಂದು ಇದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2020ರ ಫೆಬ್ರವರಿ 1ರಂದು ನೇಮಕಾತಿ ನಿಯಮ ಬದಲಾಯಿಸಿದ್ದರಿಂದ 150 ಅಭ್ಯರ್ಥಿಗಳು ಹೊರಗುಳಿದಿದ್ದು ಅವರು ಕೋರ್ಟ್ ಮೊರೆ ಹೋಗಿರುವುದರಿಂದ ವಿಳಂಬವಾಗಿದೆ ಎನ್ನಲಾಗಿದೆ.