ಬೆಂಗಳೂರು: ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಹಿ ಸುದ್ದಿ ನೀಡಿದ್ದು ಶೀಘ್ರವೇ 770 ಶಿಕ್ಷಕರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆಯಿಂದ ಮೊದಲಾದ ಕಾರಣಗಳಿಂದ ತೆರವಾದ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭದ ನಂತರ ನೇಮಕಾತಿಗೆ ಒಪ್ಪಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯರಾ ಮರಿತಿಬ್ಬೇಗೌಡ, ಪುಟ್ಟಣ್ಣ, ಶ್ರೀಕಂಠೇಗೌಡ, ಅರುಣ ಶಹಾಪುರ ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಿಎಂ, ಕೊರೋನಾ ಸಾಂಕ್ರಮಿಕ ರೋಗದ ಕಾರಣ ಆರ್ಥಿಕ ಸಂಕಷ್ಟ ಎದುರಾಗಿದ್ದು, ಹುದ್ದೆಗಳ ನೇಮಕಾತಿಗೆ ತಡೆ ಹಿಡಿಯಲಾಗಿದೆ. ಈಗ 2015 ರ ಡಿಸೆಂಬರ್ 31 ರ ಅಂತ್ಯಕ್ಕೆ ಮರಣ, ನಿವೃತ್ತಿ, ರಾಜೀನಾಮೆ ಮೊದಲಾದ ಕಾರಣದಿಂದ ಖಾಲಿಯಾದ ಹುದ್ದೆಗಳಿಗೆ ಅನುಮೋದನೆಗೊಂಡ ನೇಮಕಾತಿ ಪ್ರಕ್ರಿಯೆಗಳಿಗೆ ಒಪ್ಪಿಗೆ ನೀಡಲಾಗುವುದು. ಶೈಕ್ಷಣಿಕ ವರ್ಷ ಆರಂಭದ ಬಳಿಕ ನೇಮಕಾತಿ ಆದೇಶ ನೀಡಲಾಗುವುದು ಎಂದಿದ್ದಾರೆ.