ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಿಂದ ಎಚ್ಚೆತ್ತ ಸರ್ಕಾರ ಬಿಗಿಭದ್ರತೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಲು ಮುಂದಾಗಿದೆ.
15000 ಶಿಕ್ಷಕರ ನೇಮಕಾತಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬಿಗಿಭದ್ರತೆಯಲ್ಲಿ ನಡೆಸಲಾಗುತ್ತದೆ. ಮೇ 21 ಮತ್ತು 22ರಂದು ಶಿಕ್ಷಕರ ನೇಮಕಾತಿಗೆ ಸಿಇಟಿ ನಡೆಯಲಿದ್ದು, 1.06 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಸಿಇಟಿ ಫುಲ್ ಟೈಟ್ ಮಾಡಲಾಗುತ್ತದೆ. ಪರೀಕ್ಷಾರ್ಥಿಗಳು ಶರ್ಟ್ ಮೇಲೆ ಜಾಕೆಟ್ ಧರಿಸುವಂತಿಲ್ಲ. ಚಪ್ಪಲಿ ಧರಿಸಲು ಅವಕಾಶವಿದೆ. ಶೂ ಧರಿಸುವಂತಿಲ್ಲ. ಕುತ್ತಿಗೆಗೆ ಲೋಹದ ಆಭರಣ ಧರಿಸುವಂತಿಲ್ಲ. ಯುವತಿಯರು ಕಿವಿಯೋಲೆ, ಉಂಗುರ, ನೆಕ್ಲೇಸ್ ಧರಿಸುವಂತಿಲ್ಲ.
ಪೆನ್ ಡ್ರೈವ್, ಮೈಕ್ರೋ ಫೋನ್, ಬ್ಲೂಟೂತ್, ಫೋನ್ ಗಳಿಗೆ ನಿರ್ಬಂಧವಿದೆ. ಎಲ್ಲಾ ರೀತಿಯ ವಾಚುಗಳನ್ನು ನಿರ್ಬಂಧಿಸಲಾಗಿದೆ. ಪಾರದರ್ಶಕ ವಾಟರ್ ಬಾಟಲಿ ತರಲು ಮಾತ್ರ ಅವಕಾಶ ಇದೆ. ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುವುದು. ಹೀಗೆ ಶಿಕ್ಷಕರ ನೇಮಕಾತಿಗೆ ಸಿಇಟಿಯನ್ನು ಕಠಿಣ ರೂಪದಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.