ಬೆಂಗಳೂರು: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7,000 ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.
ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು ನಿರ್ಣಯ ಕೈಗೊಂಡಿದ್ದಾರೆ. ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿದ್ದು, ಇಲ್ಲವಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖ ವೈ.ಹೆಚ್. ಹುಚ್ಚಯ್ಯ, 7129 ಹುದ್ದೆಗಳು ಖಾಲಿ ಇದ್ದು, 2023ರ ಆಗಸ್ಟ್ ನಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಕೂಡಲೇ ಪಾಲಿಸಬೇಕು. 3700 ಅನುದಾನಿತ ಶಾಲೆಗಳಲ್ಲಿ 7 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. 2015ರ ನಂತರ ನೇಮಕಾತಿಯಾಗಿಲ್ಲ. ಇಂಗ್ಲಿಷ್, ವಿಜ್ಞಾನ, ಗಣಿತ ಸೇರಿ ಅನೇಕ ವಿಷಯಗಳಿಗೆ ಶಿಕ್ಷಕರೇ ಇಲ್ಲ. ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಹಣ ನೀಡುತ್ತಿರುವ ಸರ್ಕಾರ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.