ಬೆಂಗಳೂರು: ಸಾಧನೆ ಮಾಡಿದ ಶಿಕ್ಷಕರನ್ನು ಪ್ರತಿ ವರ್ಷ ಗುರುತಿಸಿ ರಾಷ್ಟ್ರಪ್ರಶಸ್ತಿ ನೀಡಲಾಗುತ್ತದೆ. ಅಂತೆಯೇ ಖಾಸಗಿ ಶಾಲಾ ಶಿಕ್ಷಕರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರ ಪ್ರಶಸ್ತಿ ಶಿಕ್ಷಕರ ಆಯ್ಕೆಯ ಮಾನದಂಡಗಳನ್ನು ಪರಿಷ್ಕರಿಸಿದ್ದು, ಖಾಸಗಿ ಶಾಲೆ ಶಿಕ್ಷಕರು ಕೂಡ 2023 -24ನೇ ಸಾಲಿಗೆ ಅರ್ಜಿ ಸಲ್ಲಿಸಬಹುದು. ಜುಲೈ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಪ್ರತಿ ವರ್ಷ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಿದ್ದು, ದೇಶಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಲು ಮತ್ತು ಅಂತಹ ಶಿಕ್ಷಕರ ಹೆಸರನ್ನು ಮಾತ್ರ ಶಿಫಾರಸು ಮಾಡಲು ಅವಕಾಶವಿತ್ತು.
ರಾಜ್ಯ ಪಠ್ಯ ಕ್ರಮದ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರ ಕೂಡ ಈಗ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಖಾಸಗಿ ಶಾಲೆಗಳಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರ ಹೆಸರನ್ನು ಸಾರ್ವಜನಿಕರು ಶಿಫಾರಸು ಮಾಡಬಹುದಾಗಿದ್ದು, ಡಿಡಿಪಿಐ ಈ ನಿಟ್ಟಿನಲ್ಲಿ ಪ್ರಚಾರ ನೀಡಿ ಶಿಕ್ಷಕರನ್ನು ನೋಂದಣಿ ಮಾಡಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.