ರಾಯಚೂರು: ಶಾಲೆಗೆ ಚಕ್ಕರ್ ಹಾಕಿ ಶಿಕ್ಷಕರು ಎಣ್ಣೆ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಕಾಲೇಜಿನ ಪ್ರಾಂಶುಪಾಲ ಮುರಳಿಧರ ಕುಲಕರ್ಣಿ, ಸಹ ಶಿಕ್ಷಕರಾದ ಲಿಂಗಪ್ಪ ಪೂಜಾರ್, ಕೇಶವಕುಮಾರ್, ಅಬ್ದುಲ್ ಅಜಿಜ್, ಚೆನ್ನಪ್ಪ ರಾಥೋಡ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಕಲಬುರ್ಗಿಯ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ಡಿಸೆಂಬರ್ 22ರಂದು ಶಾಲೆಗೆ ಹಾಜರಾಗದೆ ಶಿಕ್ಷಕರು ಎಣ್ಣೆ ಪಾರ್ಟಿ ಮಾಡಿದ್ದರು. ಐವರು ಶಿಕ್ಷಕರ ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.