ಮೈಸೂರು: ಶಾಲೆಗೆ ಮೊಬೈಲ್ ತಂದಿದ್ದಕ್ಕೆ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಲ್ಲದೇ, ಚಳಿಗೆ ನಡುಗುವಂತೆ ಫ್ಯಾನ್ ಕೆಳಗೆ ಬರಿಮೈಯಲ್ಲಿ ಕೂರಿಸಿದ್ದ ಮುಖ್ಯಶಿಕ್ಷಕಿ ಅಮಾನತು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಉಪನಿರ್ದೇಶಕರು ಶಿಫಾರಸು ಮಾಡಿದ್ದಾರೆ.
ಡಿಸೆಂಬರ್ 22ರಂದು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊಬೈಲ್ ತಂದಿದ್ದ ಕಾರಣಕ್ಕೆ ಎಂಟನೇ ತರಗತಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಮುಖ್ಯ ಶಿಕ್ಷಕಿ ಥಳಿಸಿದ್ದಾರೆ. ಮೊಬೈಲ್ ತಂದವರು ಕೊಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಿಂದ ನಿಮ್ಮನ್ನು ಚೆಕ್ ಮಾಡಿಸುತ್ತೇನೆ ಎಂದು ಮುಖ್ಯಶಿಕ್ಷಕಿ ಬೆದರಿಕೆ ಹಾಕಿದ್ದು, ಕೆಲವು ವಿದ್ಯಾರ್ಥಿನಿಯರ ಸ್ವೆಟರ್ ಬಿಚ್ಚಿಸಿದ್ದಾರೆ. ವಿದ್ಯಾರ್ಥಿನಿಯ ಸ್ಕರ್ಟ್ ಹರಿದುಹಾಕಿದ್ದಾರೆ. ಓರ್ವ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಹಲ್ಲೆ ಮಾಡಿ ಚಳಿ ಆಗಲೆಂದು ಜೋರಾಗಿ ಫ್ಯಾನ್ ಹಾಕಿ ಕೆಳಗೆ ಬೆತ್ತಲೆ ಕೂರಿಸಿದ್ದಾರೆ. ಸಂಜೆವರೆಗೂ ಊಟ ನೀರು ಕೊಡದೇ ಹಾಗೆಯೇ ಕೂರಿಸಿದ್ದಾರೆ.
ಸಂಜೆ ಮನೆಗೆ ಮರಳಿದ ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಪರಿಶೀಲನೆ ನಡೆಸಿದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಮುಖ್ಯ ಶಿಕ್ಷಕಿ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.