ತುಮಕೂರು: ಅತಿಥಿ ಶಿಕ್ಷಕ ಮರಿಯಪ್ಪ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಶೋಭಾ, ಮಗಳು ಹೇಮಲತಾ ಕೊಲೆಗೆ ಸುಪಾರಿ ನೀಡಿರುವುದು ತುಮಕೂರು ಜಿಲ್ಲೆ ಕುಣಿಗಲ್ ಠಾಣೆಯ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಫೆಬ್ರವರಿ 10ರಂದು ಕೋಳಿನಂಜಯ್ಯನಪಾಳ್ಯದಲ್ಲಿ ಮರಿಯಪ್ಪರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಗಳ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದಕ್ಕೆ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಕೋಳಿನಂಜಯ್ಯನಪಾಳ್ಯದ ನಿವಾಸಿ ಶಾಂತಕುಮಾರ್ ನನ್ನು ಪುತ್ರಿ ಹೇಮಲತಾ ಪ್ರೀತಿಸಿದ್ದಳು. ಈ ಸಂಬಂಧ ಶಾಂತಕುಮಾರನನ್ನು ಅತಿಥಿ ಶಿಕ್ಷಕ ಮರಿಯಪ್ಪ ಥಳಿಸಿದ್ದರು.
ಹಲ್ಲೆಯಿಂದ ಮರಿಯಪ್ಪನ ಮೇಲೆ ಶಾಂತಕುಮಾರ್ ಗೆ ದ್ವೇಷ ಹೆಚ್ಚಾಗಿತ್ತು. ಸ್ನೇಹಿತರೊಂದಿಗೆ ಸೇರಿ ಪ್ರಿಯತಮೆಯ ತಂದೆ ಮರಿಯಪ್ಪನ ಕೊಲೆಗೆ ಶಾಂತಕುಮಾರ್ ಸಂಚು ರೂಪಿಸಿದ್ದ. ಆತನಿಗೆ ಪ್ರಿಯತಮೆ ಹೇಮಲತಾ ಮತ್ತು ತಾಯಿ ಶೋಭಾ ಸಾಥ್ ನೀಡಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ಸ್ನೇಹಿತರಾದ ಸಂತು, ಹೇಮಂತ್ ಅವರಿಗೆ ಶಾಂತಕುಮಾರ್ ಸುಪಾರಿ ನೀಡಿದ್ದು, ಮೂವರು ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಹೇಮಂತ್ ಕೊಲೆ ಮಾಡಿದ್ದ.
ಮರಿಯಪ್ಪನ ಚಲನವಲನಗಳ ಬಗ್ಗೆ ತಾಯಿ ಮತ್ತು ಮಗಳು ಮಾಹಿತಿ ನೀಡಿದ್ದರು. ಅಮಾವಾಸ್ಯೆ ಪೂಜೆ ಮುಗಿಸಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಬಗ್ಗೆ ಮಾಹಿತಿ ಗೊತ್ತಾಗಿ ಪ್ರಿಯಕರ ಶಾಂತಕುಮಾರ್ ಗೆ ಪ್ರಿಯತಮೆ ಹೇಮಲತಾ ಮತ್ತು ತಾಯಿ ಶೋಭಾ ಮಾಹಿತಿ ನೀಡಿದ್ದರು.
ಬೈಕ್ ನಲ್ಲಿ ಬರುವಾಗ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಓಡಿ ಹೋಗುತ್ತಿದ್ದ ಮರಿಯಪ್ಪನನ್ನು ಬೆನ್ನತ್ತಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಶಾಂತಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕುಣಿಗಲ್ ಠಾಣೆಯ ಪೊಲೀಸರು 8 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಂದೆಯ ಕೊಲೆ ಮಾಡಿಸಿ ಪುತ್ರಿ ಹೇಮಲತಾ ಪೊಲೀಸರಿಗೆ ದೂರು ನೀಡಿದ್ದಳು. ಪ್ರೇಮ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದಾಗ ಕೃತ್ಯವೆಸಗಿದ್ದು ಬಹಿರಂಗವಾಗಿದೆ.