ಐದು ವರ್ಷದ ವಿದ್ಯಾರ್ಥಿಯು ಶಿಕ್ಷಕಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಅಮೇರಿಕಾದ, ಫ್ಲೋರಿಡಾದಲ್ಲಿ ನಡೆದಿದೆ. ವಿದ್ಯಾರ್ಥಿಯ ಹಲ್ಲೆಯಿಂದ ನಲುಗಿದ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫ್ಲೋರಿಡಾದ ಪೆಂಬ್ರೋಕ್ ಪೈನ್ಸ್ ಪೊಲೀಸ್ ಇಲಾಖೆ ತಿಳಿಸಿದೆ.
ವರದಿಗಳ ಪ್ರಕಾರ, ಪೈನ್ಸ್ ಲೇಕ್ಸ್ ಎಲಿಮೆಂಟರಿ ವಿದ್ಯಾರ್ಥಿಯು ತನ್ನ ಶಿಕ್ಷಕರ ಮೇಲೆ ಮುಷ್ಟಿ ಮತ್ತು ಪಾದಗಳನ್ನು ಬಳಸಿ ಹಲ್ಲೆ ಮಾಡಿದ್ದಾನೆ. ಬುಧವಾರ ಬೆಳಗ್ಗೆ ಸುಮಾರು ಹತ್ತು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.
ಬಸ್ ನಿಲ್ದಾಣದಲ್ಲಿ ಬೆಂಕಿ ಅವಘಡ; ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಟ್ಟಡ
ಶಾಲೆಯ “ಕೂಲ್ ಡೌನ್” ಕೋಣೆಯಲ್ಲಿ ಅವನು ಮತ್ತು 4 ವರ್ಷದ ಇನ್ನೊಬ್ಬ ವಿದ್ಯಾರ್ಥಿ, ಕೋಣೆಯಲ್ಲಿದ್ದ ವಸ್ತುಗಳನ್ನು ಎಸೆದಾಡುತ್ತ ಮತ್ತು ಕುರ್ಚಿಗಳನ್ನು ತಿರುಗಿಸುತ್ತಾ ಗಲಾಟೆ ಮಾಡುತ್ತಿದ್ದರು, ಇದನ್ನು ವಿರೋಧಿಸಿದ ಶಿಕ್ಷಕಿಯ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ವರದಿ ದಾಖಲಿಸಿಕೊಂಡ ಪೊಲೀಸರು ಶಾಲೆಗೆ ದೌಡಾಯಿಸಿದ್ದಾರೆ. ಒಬ್ಬ ಅಧಿಕಾರಿ ಘಟನೆ ನಡೆದ ತರಗತಿಗೆ ಬಂದಾಗ, ಶಿಕ್ಷಕಿಯು ನಿತ್ರಾಣಗೊಂಡಿರುವುದನ್ನು ಕಂಡಿದ್ದಾರೆ. ಆಕೆ ಗೋಡೆಯ ಮೇಲೆ ಒರಗಿದ್ದಳು. ಇನ್ನೇನು ಮೂರ್ಛೆ ಹೋಗಿ ಕೆಳಗೆ ಬೀಳಲಿದ್ದ ಆಕೆಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ ಹತ್ತಿರದ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿಯ ಹಲ್ಲೆಯಿಂದ ಶಿಕ್ಷಕಿ ಯಾವ ಮಟ್ಟಿಗೆ ನಿತ್ರಾಣಗೊಂಡಿದ್ದರೆಂದರೆ, ಆಕೆಯನ್ನು ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಲು ಸ್ಟ್ರೆಚರ್ ಬಳಸಲಾಗಿದೆ. ಈಗಲೂ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಧ್ಯ ಐದು ವರ್ಷದ ವಿದ್ಯಾರ್ಥಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಪೋಸ್ಟ್ ನೋಡಿದ ಹಲವರು ಸಣ್ಣ ಮಕ್ಕಳಿಂದ ಆಗುವ ತೊಂದರೆಗಳ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.