ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(KSAT) ಶಿಕ್ಷಕರ ವರ್ಗಾವಣೆಗೆ ತಡೆ ನೀಡಿದ್ದು, ವೃಂದವಾರು ಕೌನ್ಸೆಲಿಂಗ್ ನಡೆಸುವ ಮೂಲಕ ಪುನಃ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ತಿಳಿಸಿದೆ.
ಒಂದರಿಂದ ಐದನೇ ತರಗತಿ ಪಾಠ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಆರರಿಂದ ಎಂಟನೇ ತರಗತಿಗೆ ಪಾಠ ಮಾಡುವ ಶಿಕ್ಷಕರ ಹುದ್ದೆಗಳಿಗೆ ವರ್ಗಾಯಿಸುವುದಕ್ಕೆ ತಡೆ ನೀಡಲಾಗಿದೆ. ಪುನಃ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂದು ಹೇಳಲಾಗಿದೆ.
ಪ್ರಾಥಮಿಕ ಶಾಲೆಯ ಪಿ.ಎಸ್.ಟಿ. ಶಿಕ್ಷಕರನ್ನು ಆರರಿಂದ ಎಂಟನೇ ತರಗತಿಗೆ ಪಾಠ ಮಾಡುವ ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ನಿಯೋಜಿಸಲು ತಡೆ ನೀಡಲಾಗಿದ್ದು, ಆರರಿಂದ ಎಂಟನೇ ತರಗತಿ ಪಾಠ ಮಾಡಲು ಪದವೀಧರ ಶಿಕ್ಷಕರನ್ನೇ ನಿಯೋಜಿಸಬೇಕು. ಈಗಾಗಲೇ ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರನ್ನು ನಿಯೋಜಿತ ಶಿಕ್ಷಕರು ಎಂದು ಪರಿಗಣಿಸಬೇಕು. ವೃಂದವಾರು ಮರು ಕೌನ್ಸೆಲಿಂಗ್ ನಡೆಸುವ ಮೂಲಕ ಪುನಃ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ಎರಡು ತಿಂಗಳೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದಿಂದಾಗಿ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಅನಿಶ್ಚಿತತೆ ಉಂಟಾಗಿದ್ದು, ಸಾವಿರಾರು ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2020 -21 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ 75,000 ಶಿಕ್ಷಕರು ಅರ್ಜಿ ಸಲ್ಲಿಸಿದ್ದು, 21,000 ಶಿಕ್ಷಕರ ವರ್ಗಾವಣೆ ಪಡೆದುಕೊಂಡಿದ್ದಾರೆ. ಸುಮಾರು 5000 ಕ್ಕೂ ಹೆಚ್ಚು ಪಿ.ಎಸ್.ಟಿ. ಶಿಕ್ಷಕರು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ವರ್ಗಾವಣೆಗೊಂಡಿದ್ದು, ಮರು ವರ್ಗಾವಣೆ ನಡೆದರೆ ಇವರೆಲ್ಲರೂ ತಮ್ಮ ಮೂಲ ಸ್ಥಾನಗಳಿಗೆ ವಾಪಸ್ ಆಗುವ ಸಾಧ್ಯತೆ ಇದ್ದು, ಇದರಿಂದಾಗಿ ಶಿಕ್ಷಕ ವಲಯದಲ್ಲಿ ಮತ್ತೆ ಆತಂಕ ಎದುರಾಗಿದೆ ಎನ್ನಲಾಗಿದೆ.